ಬೆಂಗಳೂರು: ಲಾಕ್ ಡೌನ್ ಮುಗಿದು ಸಿನಿಮಾ ಚಿತ್ರೀಕರಣಕ್ಕೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಚಿತ್ರರಂಗದ ಮಂದಿಗೆ ಕೆಲಸ ಸಾಗಬೇಕೆಂದರೆ ಮುಖ್ಯವಾಗಿ ಬೇಕಾದುದು ಥಿಯೇಟರ್.
ಚಿತ್ರಮಂದಿರ ತೆರೆಯದೇ ಕೇವಲ ಸಾಲು ಸಾಲು ಚಿತ್ರಗಳನ್ನು ನಿರ್ಮಿಸಿದರೆ ಏನು ಪ್ರಯೋಜನ? ಆದಾಯ ಎಲ್ಲಿಂದ ಬರಬೇಕು? ಇದು ಸದ್ಯಕ್ಕೆ ಚಿತ್ರ ನಿರ್ಮಾಪಕರ ಚಿಂತೆಗೆ ಕಾರಣ.
ಸ್ಟಾರ್ ನಟರ ಸಿನಿಮಾಗಳನ್ನು ಆನ್ ಲೈನ್ ಆಪ್ ಗಳ ಮೂಲಕ ಬಿಡುಗಡೆ ಮಾಡಲೂ ಮನಸ್ಸಿಲ್ಲ. ಇತ್ತ ಚಿತ್ರಮಂದಿರ ಯಾವಾಗ ತೆರೆಯುತ್ತದೆ ಎನ್ನುವುದಕ್ಕೆ ಗ್ಯಾರಂಟಿಯಿಲ್ಲ. ಇದುವರೆಗೆ ಆಗಸ್ಟ್ ನಲ್ಲಿ ಚಿತ್ರಮಂದಿರ ತೆರೆಯಲು ಸರ್ಕಾರ ಒಪ್ಪಿಗೆ ನೀಡಬಹುದು ಎಂಬ ಆಶಾಭಾವನೆಯಿತ್ತು. ಆದರೆ ಇದೀಗ ಮತ್ತೆ ಲಾಕ್ ಡೌನ್ ಮಾಡುವ ಮಾತುಗಳು ಕೇಳಬರುತ್ತಿದೆ. ಹೀಗಾಗಿ ಸದ್ಯಕ್ಕಂತೂ ಚಿತ್ರಮಂದಿರ ತೆರೆಯಲು ಅವಕಾಶ ಸಿಗದು. ಇದರಿಂದ ಹೊಸ ಚಿತ್ರಗಳ ಚಿತ್ರೀಕರಣ ಆರಂಭಿಸಲೂ ಹಿಂದೇಟು ಹಾಕುತ್ತಿದ್ದಾರೆ.