ಶನಿವಾರ ವಾರದ ಲೆಕ್ಕಚಾರ ನಡೆಸಿದ ಕಿಚ್ಚ ಸುದೀಪ್ ಅವರು ಸ್ಪರ್ಧಿ ಚೈತ್ರಾ ಕುಂದಾಪುರ ಮಾತಿನಿಂದ ತಾಳ್ಮೆ ಕಳೆದುಕೊಂಡು, ಗರಂ ಆಗಿದ್ದಾರೆ. ಮೊದಲ ಬಾರಿಯಂತೆ ಮಹಿಳಾ ಸ್ಪರ್ಧಿಯೊಬ್ಬರ ಮೇಲೆ ಕಿಚ್ಚ ಸುದೀಪ್ ಇಷ್ಟೊಂದು ಕೋಪ ತೋರಿಸಿದ್ದು.
ಇದಕ್ಕೆ ಕಾರಣ ಚೈತ್ರಾ ಕುಂದಾಪುರ ಅವರ ಮಾತು ಮತ್ತು ಕಳೆದ ವಾರ ಅವರು ಸಹ ಸ್ಪರ್ಧಿಗಳ ಜತೆ ನಡೆದುಕೊಂಡ ರೀತಿ. ಅನಾರೋಗ್ಯದ ಕಾರಣ 'ಬಿಗ್ ಬಾಸ್' ಮನೆಯಲ್ಲಿ ಕುಸಿದು ಬಿದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಿಂದ ಆಸ್ಪತ್ರೆಗೆ ಹೋಗಿದ್ದ ಅವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಹೊರಗೆ ಯಾರು ಹೇಗೆಲ್ಲಾ ಆಟವಾಡುತ್ತಿದ್ದಾರೆ ಎಂದು ಆಸ್ಪತ್ರೆ ಕೆಲವು ಸಿಬ್ಬಂದಿ ನನಗೆ ಹೇಳಿದ್ದಾರೆ ಎಂದು ಚೈತ್ರಾ ಕತೆಗಳ ಮೂಲಕ, ಸನ್ನೆಗಳ ಮೂಲಕ ಮನೆಯವರಿಗೆ ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸುದೀಪ್ ಅವರು ಚೈತ್ರಾ ಬಳಿ ಮಾತನಾಡಿದ್ದಾರೆ. ಸುದೀಪ್ ಮಾತನಾಡುವಾಗ ಮತ್ತು ಬೇರೊಬ್ಬರ ಅಭಿಪ್ರಾಯ ಪಡೆದುಕೊಳ್ಳುವಾಗ ಚೈತ್ರಾ ಪದೇ ಪದೇ ಕೈ ಎತ್ತುವುದು. ಮಧ್ಯೆ ಮಾತನಾಡುವುದನ್ನು ಮಾಡುತ್ತಿದ್ದರು. ಹೀಗೆ ಮಾಡುವುದು ಬೇಡ ಕೈ ಎತ್ತಿ ಮಾತನಾಡಿ ಎಂದು ಸುದೀಪ್ ಹೇಳಿದ್ದರೂ ಚೈತ್ರಾ ಗಮನಕ್ಕೆ ತೆಗೆದುಕೊಳ್ಳದೆ ಮಧ್ಯಮಧ್ಯ ಬಾಯಿ ಹಾಕಿದ್ದಾರೆ. ಇದರಿಂದ ಕೆರಳಿದ ಸುದೀಪ್ ಒಂದೇ ಬಾರಿಗೆ ಸಿಟ್ಟಿನಿಂದ ಮಾತನಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾನವೀಯತೆಯಿಂದ, ಪ್ರೀತಿಯಿಂದ ನಡೆದುಕೊಳ್ಳಲು ಅವಕಾಶ ಮಾಡಿಕೊಡಿ. ನನಗೆ ಅಗೌರವ ತೋರಬೇಡಿ, ಹೊರಗೆ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ. ನಾನು ಡಿಮ್ಯಾಂಡ್ ಮಾಡಿ ಜನರ ಪ್ರೀತಿ ಸಂಪಾದಿಸಿಲ್ಲ, ಕಮಾಂಡ್ ಮಾಡಿ ಸಂಪಾದಿಸಿದ್ದೇನೆ. ನಂತರ ಜೋರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಚೈತ್ರಾ ಬಳಿ ಸುದೀಪ್ ಕ್ಷಮೆ ಕೇಳಿದ್ದಾರೆ.