ಬೆಂಗಳೂರು: ಕಿಚ್ಚ ಸುದೀಪ್ ಗೆ ಇಂದು ವಿಶೇಷ ದಿನ. ಯಾಕೆಂದರೆ ಇಂದು ಅವರ ವೃತ್ತಿ ಜೀವನದಲ್ಲಿ ತಿರುವು ತಂದ ಎರಡು ಸಿನಿಮಾಗಳು ಬಿಡುಗಡೆಯಾದ ದಿನ. ಹೀಗಾಗಿ ಈ ವಿಶೇಷ ದಿನದ ಬಗ್ಗೆ ಅವರು ಮನದಾಳ ಹಂಚಿಕೊಂಡಿದ್ದಾರೆ.
ಹುಚ್ಚ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಆಂಗ್ರಿಯಂಗ್ ಮ್ಯಾನ್ ಕಿಚ್ಚನಾಗಿ ಖ್ಯಾತಿ ಪಡೆದ ಸುದೀಪ್ ಇಂದು ಆ ಸಿನಿಮಾ ಬಿಡುಗಡೆಯಾಗಿ ಎರಡು ದಶಕ ಕಳೆದ ಖುಷಿ ಹಂಚಿಕೊಂಡಿದ್ದಾರೆ. ಸುದೀಪ್ ಇಂದು ಎಷ್ಟೇ ಒಳ್ಳೆಯ ಸಿನಿಮಾಗಳನ್ನು ಮಾಡಿದ್ದರೂ ಆ ಸಿನಿಮಾದಿಂದಲೇ ಅವರನ್ನು ಜನ ಇಂದಿಗೂ ಗುರುತಿಸುತ್ತಾರೆ.
ಇನ್ನೊಂದೆಡೆ ಬೇರೆ ಭಾಷೆಗಳಲ್ಲೂ ಕಿಚ್ಚನಿಗೆ ಸ್ಟಾರ್ ಡಂ ತಂದುಕೊಟ್ಟ ಸಿನಿಮಾ ಎಂದರೆ ಎಸ್ಎಸ್ ರಾಜಮೌಳಿ ನಿರ್ದೇಶನದ ಈಗ ಸಿನಿಮಾ. ಆ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷವಾಗಿದೆ. ಇದೂ ಕೂಡಾ ಸೂಪರ್ ಹಿಟ್ ಆಗಿ ಪರಭಾಷೆಗಳಲ್ಲೂ ಜನ ಕಿಚ್ಚನನ್ನು ಆರಾಧಿಸುವಂತೆ ಮಾಡಿತ್ತು. ಹೀಗಾಗಿ ಈ ಎರಡೂ ಸಿನಿಮಾಗಳೂ ಒಂದೇ ದಿನ ಬಿಡುಗಡೆಯಾದ ನನ್ನ ಎರಡು ಮರೆಯಲಾಗದ ಸಿನಿಮಾಗಳು ಎಂದು ಕಿಚ್ಚ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎರಡೂ ಸಿನಿಮಾಗಳ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.