ಮುಂಬೈ: ಗರ್ಭಾವಸ್ಥೆಯ ಕುರಿತಾದ ತಮ್ಮ ಪುಸ್ತಕದ ಶೀರ್ಷಿಕೆಯಲ್ಲಿ 'ಬೈಬಲ್' ಎಂಬ ಪದವನ್ನು ಬಳಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಾಗರಿಕರೊಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ ಮಧ್ಯಪ್ರದೇಶ ಹೈಕೋರ್ಟ್ ನಟಿ ಕರೀನಾ ಕಪೂರ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
'ಕರೀನಾ ಕಪೂರ್ ಖಾನ್'ಸ್ ಪ್ರೆಗ್ನೆನ್ಸಿ ಬೈಬಲ್ ಎನ್ನುವ ಪುಸ್ತಕವನ್ನು ಆಗಸ್ಟ್ 2021 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಕರೀನಾ ಅವರು ತಮ್ಮ ಪ್ರೆಗ್ನೆನ್ಸಿ ಜರ್ನಿ ಹಾಗೂ ತಾಯಿಯಾಗುವವರಿಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದರು. ಈ ಪುಸ್ತಕದ ಸಲುವಾಗಿ ನಟಿಗೆ ತುಂಬಾನೆ ಪ್ರೀತಿ ಹಾಗೂ ಹಲವು ಗರ್ಭಿಣಿಯರಿಗೆ ಸ್ಪೂರ್ತಿ ಪಡೆದಿರುವ ಬಗ್ಗೆ ಹೇಳಿಕೊಂಡಿದ್ದರು.ಆದರೆ ಇದೀಗ ಪುಸ್ತಕದ ಶೀರ್ಷಿಕೆ ಸಲುವಾಗಿ ಸಂಕಷ್ಟ ಎದುರಿಸುತ್ತಿದೆ.
ಪುಸ್ತಕದ ಶೀರ್ಷಿಕೆ ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಕೀಲ ಕ್ರಿಸ್ಟೋಫರ್ ಆಂಥೋನಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಅಗ್ಗದ ಜನಪ್ರಿಯತೆ ಪಡೆಯುವ ಉದ್ದೇಶದಿಂದ ಶೀರ್ಷಿಕೆಯಲ್ಲಿ 'ಬೈಬಲ್' ಪದ ಬಳಸಲಾಗಿದ್ದು, ಆಕ್ಷೇಪಾರ್ಹವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕರೀನಾ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲು ತನ್ನ ಮನವಿಯನ್ನು ವಜಾಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಆಂಟನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪ್ರಕರಣದ ಮುಂದಿನ ವಿಚಾರಣೆ ಜುಲೈ 1 ರಂದು ನಡೆಯುವ ಸಾಧ್ಯತೆ ಇದೆ.