ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ 11ನೇ ದಿನವಾದ ಇಂದು ಬಳ್ಳಾರಿಯಲ್ಲಿ ಜನಾರ್ಧನ್ ರೆಡ್ಡಿ, ಅವರ ತಾಯಿ ಹೆಸರಿನಲ್ಲಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮದಲ್ಲಿ, ಲಕ್ಷ್ಮಿ ಅರುಣಾ, ಸಹೋದರ ಹಾಗೂ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ, ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಾಲಣ್ಣ, ಬಳ್ಳಾರಿಯ ನಗರ ಪಾಲಿಕೆ ಸದಸ್ಯರು ಹಾಗೂ ಮತ್ತಿತರ ಮುಖಂಡರ ಜೊತೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಹೊಸ ಬಟ್ಟೆ ಮತ್ತು ಅನ್ನದಾನ ಸಂತರ್ಪಣೆ ಮಾಡಲಾಯಿತು.
"ನಾನು ಮೊದಲಿನಿಂದಲೂ ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಅವಿನಾಭಾವ ಸಂಬಂಧ ಹೊಂದಿದ್ದೆ. ಜೊತೆಗೆ ಅವರ ಚಿತ್ರಗಳಲ್ಲಿನ ಸಮಾಜಮುಖಿ ಸಂದೇಶಗಳು ನನಗೆ ಅತ್ಯಂತ ಪ್ರಿಯವಾದವು. ಅವರ 'ರಾಜಕುಮಾರ' ಚಿತ್ರದಲ್ಲಿ ಬರುವ ವೃದ್ಧಾಶ್ರಮದಲ್ಲಿನ ಸನ್ನಿವೇಶಗಳು ಹಾಗೂ ಎಲ್ಲಾ ಹಿರಿಯರಿಗೆ ಅವರು ತೋರಿಸುವ ಪ್ರೀತಿ, ಕಾಳಜಿ ಸಮಾಜಕ್ಕೆ ಅವರು ಕೊಟ್ಟ ಒಳ್ಳೆ ಸಂದೇಶದಿಂದ ಆ ಚಿತ್ರದ ಪ್ರೇರೇಪಣೆಯಿಂದ ಎಷ್ಟೋ ಕುಟುಂಬಗಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಿಂದ ಮರಳಿ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ನನಗೆ ಈ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನನ್ನ ನೆಚ್ಚಿನ ತಾಯಿ ಹೆಸರಿನಲ್ಲಿರುವ ವೃದ್ಧಾಶ್ರಮದಲ್ಲಿ ಮಾಡುವುದು ಸೂಕ್ತವೆನಿಸಿತು.