ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಸಿವಿ ನಾಗೇಶ್ ಪೊಲೀಸ್ ತನಿಖೆಯಲ್ಲಿ ಒದಗಿಸಿರುವ ಸಾಕ್ಷ್ಯಗಳೇ ಸುಳ್ಳು ಎನ್ನಲು ಹಲವು ಲಾ ಪಾಯಿಂಟ್ ಗಳನ್ನು ಮುಂದಿಡುತ್ತಿದ್ದಾರೆ. ಅವರ ವಾದದ ವೈಖರಿ ದರ್ಶನ್ ಗೆ ಸಮಾಧಾನ ತರುವುದು ಗ್ಯಾರಂಟಿ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದ್ದು, ನಿನ್ನೆಯೇ ಸಿವಿ ನಾಗೇಶ್ ಅವರು ದರ್ಶನ್ ಪರ ವಾದ ಮಂಡನೆ ಶುರು ಮಾಡಿದ್ದರು. ಇಂದೂ ಅದು ಮುಂದುವರಿಯಿತು. ತಮ್ಮ ವಾದ ಮಂಡನೆ ವೇಳೆ ಅವರು ಪೊಲೀಸ್ ತನಿಖೆಯಲ್ಲಿನ ತಪ್ಪುಗಳ ಬಗ್ಗೆ ಹೇಳಿದರು. ಅಲ್ಲದೆ, ಈ ಪ್ರಕರಣದಲ್ಲಿ ಕೆಲವು ಸಾಕ್ಷ್ಯಗಳನ್ನು ಪೊಲೀಸರೇ ಸೃಷ್ಟಿಸಿದ್ದಾರೆ ಎಂದೂ ವಾದಿಸಿದ್ದಾರೆ.
ಇಂದೂ ಕೂಡಾ ಅವರು ಪೊಲೀಸರು ದರ್ಶನ್ ವಿರುದ್ಧ ಯಾವ ರೀತಿ ಸಾಕ್ಷ್ಯ ಕಲೆ ಹಾಕಿದರು ಎಂಬ ಬಗ್ಗೆ ವಾದ ಮುಂದುವರಿಸಿದರು. ರೇಣುಕಾಸ್ವಾಮಿ ಪ್ರಕರಣ ನಡೆದ ಜಾಗದಲ್ಲಿ ಮಣ್ಣು ಸಂಗ್ರಹಿಸಿ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದಾಗ ಅದರಲ್ಲಿ ರಕ್ತದ ಮಾದರಿಯಿತ್ತು ಎಂಬ ವರದಿ ಬಂದಿದೆ. ಆದರೆ ಪಂಚನಾಮೆಯಲ್ಲಿ ಇಲ್ಲದ್ದು ಇಲ್ಲಿ ಹೇಗೆ ಬಂತು? ದರ್ಶನ್ ಹೇಳಿಕೆಯಲ್ಲಿ ಚಪ್ಪಲಿಯೇ ಶೂ ಆಗಿರುವಾಗ ಇದರಲ್ಲಿ ಏನೂ ವಿಶೇಷವಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಎ14 ಮೊಬೈಲ್ ನಲ್ಲಿ ಮೃತನ ಫೋಟೋ ಇತ್ತೆಂದು ಹೇಳಲಾಗಿತ್ತು. ಆ ಫೋಟೋವನ್ನು ರಿಟ್ರೀವ್ ಮಾಡಿರುವುದಾಗಿ ಪೊಲೀಸರು ಹೇಳಿದ್ದರು. ಪಿಎಸ್ಐ ವಿನಯ್ ಅಂದು ತಾನು ಕೇರಳದಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ.ಆದರೆ ಮೃತನ ಫೋಟೋವನ್ನು ಕಳುಹಿಸಿದ್ದೇ ಪಿಎಸ್ಐ ವಿನಯ್. ಆದರೆ ವಿನಯ್ ಫೋನ್ ರಿಟ್ರೀವ್ ಮಾಡಿಲ್ಲ. ಹೀಗಿದ್ದಾಗ ಇದೊಂದು ಕ್ಲಾಸಿಕಲ್ ತನಿಖೆ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ರೇಣುಕಾಸ್ವಾಮಿ ಮೃತದೇಹವನ್ನು ರಸ್ತೆಬದಿಯಲ್ಲಿ ಬಿಸಾಡಲಾಗಿತ್ತು. ಜೂನ್ 10 ರಂದು ದೂರು ದಾಖಲಿಸಲಾಗಿದೆ. ತಕ್ಷಣವೇ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂನ್ 11 ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೆ ಮಾಡಿದ್ಯಾಕೆ ಎಂಬ ಪ್ರಶ್ನೆಯಿದೆ. ಪೋಸ್ಟ್ ಮಾರ್ಟಂ ಕೂಡಾ ಜೂನ್ 11 ರ ಮಧ್ಯಾಹ್ನ 2.45 ಕ್ಕೆ ಮಾಡಲಾಗಿದೆ. ಇದಕ್ಕೆ ದೇಹದ ಐಡೆಂಟಿಟಿ ಆಗಲಿಲ್ಲ ಎಂದು ಕಾರಣ ನೀಡಿದ್ದಾರೆ. ಆದರೆ ಮಹಜರು, ಪೋಸ್ಟ್ ಮಾರ್ಟಂ ಮಾಡಲು ದೇಹದ ಐಡೆಂಟಿಟಿ ಯಾಕೆ ಬೇಕು ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.