ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಮೂರೇ ದಿನ ಬಾಕಿಯಿದ್ದು, ಈ ಬಾರಿ ಯಾರೆಲ್ಲಾ ಮನೆಯೊಳಗೆ ಪ್ರವೇಶಿಸಲಿದ್ದಾರೆ ಎಂಬ ಬಗ್ಗೆ ವೀಕ್ಷಕರ ಚರ್ಚೆ ಶುರುವಾಗಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳ ಪೈಕಿ ಕೇಳಿಬರುತ್ತಿರುವ ಪ್ರಮುಖ ಹೆಸರೆಂದರೆ ಹಿರಿಯ ನಟಿ ಪ್ರೇಮಾ ಅವರದ್ದು. ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಸುದ್ದಿಯಲ್ಲಿರುವ ಪ್ರೇಮಾ ಈ ಬಾರಿ ಹಿರಿಯ ನಟಿ ಕೆಟಗರಿಯಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗಳಿವೆ.
ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಜನರ ಗಮನ ಸೆಳೆದ ಪ್ರತಿಭೆಗಳಲ್ಲಿ ಒಬ್ಬರಾದರೂ ಪ್ರತೀ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ. ಅದರಂತೆ ಈ ಬಾರಿ ಗಿಚ್ಚಿ ಗಿಲಿ ಗಿಲಿ ವಿನ್ನರ್ ಹುಲಿ ಕಾರ್ತಿಕ್ ಹೆಸರು ಕೇಳಿಬರುತ್ತಿದೆ. ಅವರಲ್ಲದೆ, ಚಂದ್ರ ಪ್ರಭಾ ಕೂಡಾ ಲಿಸ್ಟ್ ನಲ್ಲಿದ್ದಾರೆ.
ಕಲರ್ಸ್ ಕನ್ನಡದ ಧಾರವಾಹಿಗಳ ಮೂಲಕ ಜನಮನ ಗೆದ್ದಿದ್ದ ಹೀರೋ ದೀಪಕ್ ಗೌಡ, ನಟಿ ಭವ್ಯಾ ಗೌಡ, ವರುಣ್ ಆರಾಧ್ಯ ಹೆಸರೂ ಕೇಳಿಬರುತ್ತಿದೆ. ಪ್ರತೀ ಬಾರಿ ಶೋನಲ್ಲಿ ಒಬ್ಬ ಸಿಂಗರ್ ಗೆ ಅವಕಾಶ ಸಿಗುತ್ತದೆ. ಈ ಬಾರಿ ಐಶ್ವರ್ಯಾ ರಂಗರಾಜನ್ ಹೆಸರು ಕೇಳಿಬರುತ್ತಿದೆ.
ಇನ್ನು, ಬಿಗ್ ಬಾಸ್ ಪ್ರೋಮೋ ಹೊರಬೀಳುತ್ತಿದ್ದಂತೇ ವೀಕ್ಷಕರು ಈ ಬಾರಿಯಾದರೂ ಒಬ್ಬ ಪ್ರಬಲ ಮಹಿಳಾ ಸ್ಪರ್ಧಿಯನ್ನು ಮನೆಯೊಳಗೆ ಕಳುಹಿಸಿ ಎನ್ನುತ್ತಿದ್ದಾರೆ. ಇದುವರೆಗೆ 10 ಬಿಗ್ ಬಾಸ್ ಶೋಗಳಲ್ಲಿ ವಿನ್ ಆಗಿದ್ದು ಕೇವಲ ಒಬ್ಬ ಮಹಿಳಾ ಸ್ಪರ್ಧಿ ಮಾತ್ರ. ಉಳಿದ ಎಲ್ಲಾ 9 ಸೀಸನ್ ಗಳಲ್ಲಿ ಪುರುಷರೇ ಗೆದ್ದಿದ್ದಾರೆ. ಹೀಗಾಗಿ ಈ ಬಾರಿಯಾದರೂ ಮಹಿಳಾ ಸ್ಪರ್ಧಿ ಗೆಲ್ಲುವಂತಾಗಲಿ ಎಂದು ವೀಕ್ಷಕರು ಆಶಿಸಿದ್ದಾರೆ. ಸೆಪ್ಟೆಂಬರ್ 29 ರಂದು ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ಚಾಲನೆ ಸಿಗಲಿದೆ.