ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ಈ ಬಾರಿ ಯಾವೆಲ್ಲಾ ಸ್ಪರ್ಧಿಗಳು ಪ್ರವೇಶ ಮಾಡಲಿದ್ದಾರೆ ಎಂಬ ಸುಳಿವನ್ನು ಕಲರ್ಸ್ ವಾಹಿನಿ ಬ್ಲರ್ ಫೋಟೋ ಮೂಲಕ ನೀಡಿತ್ತು. ಇದೀಗ ಬ್ಲರ್ ಫೋಟೋ ಡಿಕೋಡ್ ಮಾಡುವ ಕೆಲಸ ನಡೆದಿದೆ.
ಇದುವರೆಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸುವವರು ಯಾರು ಎಂದು ಮೊದಲೇ ಸುಳಿವು ಕೂಡಾ ಕೊಡುತ್ತಿರಲಿಲ್ಲ. ಓಪನಿಂಗ್ ದಿನವೇ ಎಲ್ಲವೂ ರಿವೀಲ್ ಆಗುತ್ತಿತ್ತು. ಆದರೆ ಈ ಬಾರಿ ಇದೇ ಮೊದಲ ಬಾರಿಗೆ ಮೊದಲೇ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗ ಮಾಡಲಾಗುತ್ತಿದೆ ಎಂದು ಕಲರ್ಸ್ ಹೇಳಿದೆ.
ಅದರಂತೆ ಈಗ ಬ್ಲರ್ ಫೋಟೋ ಪ್ರಕಟಿಸಿದೆ. ಈ ಫೋಟೋದಲ್ಲಿ ಯಾರೆಲ್ಲಾ ಇದ್ದಾರೆ ಎಂದು ಡಿಕೋಡ್ ಮಾಡುವ ಕೆಲಸ ನಡೆದಿದೆ. ಅದರಂತೆ ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್, ಜೀ ಕನ್ನಡ ಸತ್ಯ ಧಾರವಾಹಿ ಹೀರೋಯಿನ್ ಸತ್ಯ ಆಗಿದ್ದ ಗೌತಮಿ ಜಾಧವ್, ಮಲಯಾಳಂ ಮೂಲದ ಸ್ಯಾಂಡಲ್ ವುಡ್ ನಟಿ ಭಾವನಾ ಮೆನನ್, ಕಿರುತೆರೆ ನಟ ಚೇತನ್ ಚಂದ್ರ, ಲಕ್ಷ್ಮೀ ಬಾರಮ್ಮಾ ಧಾರವಾಹಿಯ ಕೀರ್ತಿ ಖ್ಯಾತಿಯ ತನ್ವಿ ರಾವ್ ಮುಂತಾದವರು ಇರಬಹುದು ಎಂದು ಬ್ಲರ್ ಫೋಟೋ ನೋಡಿ ಡಿಕೋಡ್ ಮಾಡಲಾಗುತ್ತಿದೆ.
ಇದೇ ವಾರಂತ್ಯಕ್ಕೆ ಅಂದರೆ ಸೆಪ್ಟೆಂಬರ್ 29 ರಿಂದ ಬಿಗ್ ಬಾಸ್ ಆರಂಭವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರಲಿದೆ. ಆದರೆ ಅದಕ್ಕೆ ಮೊದಲು ಸೆಪ್ಟೆಂಬರ್ 28 ರಂದು ರಾಜ ರಾಣಿ ಶೋ ಫೈನಲ್ ನಲ್ಲಿ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ.