ಬೆಂಗಳೂರು : ಸಿಡಿಲಿನ ಬಡಿತಕ್ಕೆ ಜನರು ಬಲಿಯಾಗುವುದನ್ನು ತಡೆಯಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಾಗಿದ್ದು, ಸಿಡಿಲಿನ ಕುರಿತಾದ ಮಾಹಿತಿಯನ್ನು ಜನರಿಗೆ ನೀಡುವ ಸಲುವಾಗಿ ಹೊಸ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ.
ಹೌದು. ಸಿಡಿಲು ಎಂಬ ಹೆಸರಿನ ಈ ಆ್ಯಪ್ ನಿಂದ ನೀವು ಎಲ್ಲಿ ಯಾವಾಗ ಸಿಡಿಲು ಉಂಟಾಗಲಿದೆ ಎಂಬ ಮುನ್ಸೂಚನೆಯನ್ನು ಪಡೆಯಬಹುದಾಗಿದೆ. ಈ ಆ್ಯಪ್ ನಿಮ್ಮ ಲೊಕೇಶನ್ ಆಧಾರದ ಮೇಲೆ ಕೆಲಸ ಮಾಡಲಿದೆ. ಈ ಅಪ್ಲಿಕೇಶನ್ ನನ್ನು ಓಪನ್ ಮಾಡಿದರೆ ನಿಮಗೆ ಹವಾಮಾನದ ಮಾಹಿತಿ, ಎಲ್ಲಿ ಯಾವಾಗ ಸಿಡಿಲು ಬರಲಿದೆ, ಮಳೆಯ ಸಾಧ್ಯತೆಯ ಕುರಿತಾದ ಸಂಪೂರ್ಣ ಮಾಹಿತಿ ಸಿಗಲಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಆಯ್ದ ಪ್ರದೇಶದಗಳಲ್ಲಿ ಸುಮಾರು 10 ಸೆನ್ಸಾರ್ ಗಳನ್ನು ಅಳವಡಿಸಿದ್ದು, ಈ ಮೂಲಕ ನಿಮಗೆ ಮೊಬೈಲ್ನಲ್ಲಿ ಈ ಬಗ್ಗೆ ಸೂಚನೆಗಳನ್ನು ನೀಡಲಿದೆ.
ಇಲ್ಲಿ ಕೆಂಪು, ಆರೆಂಜ್, ಹಳದಿ ಮತ್ತು ಹಸಿರು ಬಣ್ಣಗಳ ಸೂಚನೆಯ ಮೂಲಕ ಸಿಡಿಲಿನ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ನೀವಿರುವ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಬರಲಿದ್ದರೆ ಆ್ಯಪ್ ನಲ್ಲಿ ಕೆಂಪು (ರೆಡ್) ತೋರಿಸುತ್ತದೆ. ಹಾಗೆಯೇ 5 ಕಿ.ಮೀ ಒಳಗೆ ಸಿಡಿಲು ಕಾಣಿಸಿಕೊಳ್ಳುವಂತಿದ್ದರೆ ಆರೆಂಜ್ ಬಣ್ಣದಲ್ಲಿ ಕಾಣಿಸುತ್ತದೆ. 15 ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲಿನ ಬರುವ ಸಾಧ್ಯತೆಯನ್ನು ಹಳದಿ ಬಣ್ಣದಲ್ಲಿ ಸೂಚಿಸಲಾಗುತ್ತದೆ. ಹಾಗೆಯೇ ಹಸಿರ ಬಣ್ಣದಲ್ಲಿದ್ದರೆ ಸುರಕ್ಷಿತ ಎಂಬುದನ್ನು ತಿಳಿಸುತ್ತದೆ.