ನವದೆಹಲಿ: ತನ್ನ ಗ್ರಾಹಕರ ಮೊಬೈಲ್ ಗೆ ಬರುವ ಅನಪೇಕ್ಷಿತ ಕರೆ ಮತ್ತು ಸಂದೇಶಗಳನ್ನು ತಡೆಯಲು ಏರ್ ಟೆಲ್ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಇದು ಎಲ್ಲಾ ಏರ್ ಟೆಲ್ ಗ್ರಾಹಕರಿಗೆ ಲಭ್ಯವಾಗಲಿದೆ.
ಇತ್ತೀಚೆಗೆ ನಕಲಿ ಕರೆಗಳು, ಅನಪೇಕ್ಷಿತ ಕರೆಗಳ ಹಾವಳಿ ಗ್ರಾಹಕರಿಗೆ ತಲೆನೋವಾಗಿದೆ. ಹೀಗಾಗಿ ನಮ್ಮ ಸಂಸ್ಥೆ ಎಐ ತಂತ್ರಜ್ಞಾನ ಬಳಸಿ ಹೊಸದೊಂದು ಫೀಚರ್ ಕಂಡುಕೊಂಡಿದ್ದು, ಇದು ಸ್ಪಾಮ್ ಮೆಸೇಜ್ ಗಳು, ಕರೆಗಳ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಲಿದೆ ಎಂದು ಏರ್ ಟೆಲ್ ಸಂಸ್ಥೆ ಹೇಳಿದೆ.
ಇದಕ್ಕಾಗಿ ಗ್ರಾಹಕರು ಯಾವುದೇ ಎಕ್ಸ್ ಟ್ರಾ ಪರಿಶ್ರಮ ಹಾಕಬೇಕಾಗಿಲ್ಲ. ಯಾವುದೇ ಫೀಚರ್ ಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆಕ್ಟಿವೇಟ್ ಮಾಡುವ ಅವಶ್ಯಕತೆಯಿರುವುದಿಲ್ಲ. ತನ್ನ ಎಲ್ಲಾ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಏರ್ ಟೆಲ್ ಈ ಫೀಚರ್ ಒದಗಿಸಲಿದೆ. ಇದರಿಂದ ಗ್ರಾಹಕರ ತಲೆನೋವು ಕಡಿಮೆಯಾಗಲಿದೆ.
ಕಳೆದ ಮೂರು ತಿಂಗಳಿನಿಂದ ಇಂತಹದ್ದೊಂದು ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಶ್ರಮಿಸಿದ್ದೆವು. ಇದೀಗ ಅದು ಕೊನೆಗೂ ಯಶಸ್ವಿಯಾಗಿದೆ. ಇಂತಹ ಪ್ರಯತ್ನ ಇದುವರೆಗೆ ಯಾರೂ ಮಾಡಿಲ್ಲ. ಈ ಮೂಲಕ ನಾವು ಹೊಸ ಇತಿಹಾಸ ಸೃಷ್ಟಿಸಿದ್ದೇವೆ. ಇದರಿಂದ ನಮ್ಮ ಲಕ್ಷಾಂತರ ಗ್ರಾಹಕರಿಗೆ ಉಪಯೋಗವಾಗಲಿದೆ ಎಂದು ಏರ್ ಟೆಲ್ ಪ್ರಕಟಣೆ ನೀಡಿದೆ.