ಬೆಂಗಳೂರು: ರಾಜಧಾನಿಯಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಬೆಂಗಳೂರು ತಂಡಕ್ಕೆ ಇದು ಮಾಡು ಇಲ್ಲವೇ ಪಂದ್ಯವಾಗಿದೆ.
ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಪ್ಲೇಆಫ್ ರೇಸ್ನಲ್ಲಿದೆ. ಉಭಯ ತಂಡಗಳಿಗೂ ಇನ್ನು 2 ಪಂದ್ಯಗಳಿವೆ. ಎರಡರಲ್ಲೂ ಆರ್‌ಸಿಬಿ ಗೆದ್ದರೆ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಅದೇ ಡೆಲ್ಲಿ ಕ್ಯಾಪಿಟಲ್ಸ್ ತನ್ನ 2 ಮ್ಯಾಚ್ಗಳಲ್ಲೂ ಜಯ ಸಾಧಿಸಿದರೆ 16 ಅಂಕಗಳನ್ನು ಸಂಪಾದಿಸಲಿದೆ. ಹೀಗಾಗಿ ಪ್ಲೇಆಫ್ ರೇಸ್ನಲ್ಲಿರುವ ಎರಡೂ ತಂಡಗಳಿಗೂ ಇಂದಿನ ಪಂದ್ಯ ಮುಖ್ಯವಾಗಲಿದೆ.
ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್ನಲ್ಲಿ ಉಳಿಯಲಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತರೂ ಮುಂದಿನ ಹಂತಕ್ಕೇರಲು ಅವಕಾಶ ಹೊಂದಿರಲಿದೆ. ಆದರೆ ನೆಟ್ ರನ್ ರೇಟ್ ಇಳಿಕೆಯಾದರೆ ಮಾತ್ರ ಅಂಕ ಪಟ್ಟಿಯಲ್ಲಿ ಆರ್ಸಿಬಿಗಿಂತ ಕೆಳ ಸ್ಥಾನ ಪಡೆಯಲಿದೆ. ಇದಾಗ್ಯೂ ಪ್ಲೇಆಫ್ ರೇಸ್ನಿಂದ ಹೊರಬೀಳುವುದಿಲ್ಲ.
ಈ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಹೊರಗುಳಿಯಲಿದ್ದಾರೆ. ಹಿಂದಿನ ಪಂದ್ಯದಲ್ಲಿ ನಿಧಾನಗತಿ ಓವರ್ ಮಾಡಿದ್ದಕ್ಕಾಗಿ ಒಂದು ಪಂದ್ಯಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಆರಂಭದ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ ಆರ್‌ಸಿಬಿ ತಂಡವು ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೀಗ ತವರಿನ ಪ್ರೇಕ್ಷಕರ ಮುಂದೆ ಐದನೇ ಜಯ ಸಾಧಿಸುವತ್ತ ಚಿತ್ತ ಹರಿಸಿದೆ.