ದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಬ್ ಪಂತ್ ಗೆ ಒಂದು ಪಂದ್ಯದ ನಿಷೇಧ ಮತ್ತು 30 ಲಕ್ಷ ರೂ. ದಂಡ ವಿಧಿಸಲಾಗಿದೆ. ತಂಡದ ನಿಧಾನಗತಿಯ ಓವರ್ ತಪ್ಪಿಗೆ ಈ ಶಿಕ್ಷೆ ನೀಡಲಾಗಿದೆ.
ಐಪಿಎಲ್ ನಿಯಮಗಳ ಪ್ರಕಾರ ಮೊದಲ ಬಾರಿಗೆ ನಿಧಾನಗತಿಯ ಓವರ್ ಮಾಡಿದ ತಪ್ಪಿಗೆ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಈ ತಪ್ಪು ಮಾಡಿದರೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಆದರೆ ಮೂರನೇ ಬಾರಿ ತಪ್ಪು ಪುನರಾವರ್ತನೆಯಾದರೆ ನಾಯಕನಿಗೆ ಒಂದು ಪಂದ್ಯದ ನಿಷೇಧ ವಿಧಿಸಲಾಗುತ್ತದೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಿಗೆ ಆಗಿದ್ದೂ ಇದುವೇ. ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ‍್ಧ ನಡೆದಿದ್ದ ಪಂದ್ಯದಲ್ಲಿ ರಿಷಬ್ ತಂಡ ಮೂರನೇ ಬಾರಿಗೆ ನಿಧಾನಗತಿಯ ಓವರ್ ಮಾಡಿದ ತಪ್ಪು ಮಾಡಿತ್ತು. ಹೀಗಾಗಿ ರಿಷಬ್ ಗೆ ಒಂದು ಪಂದ್ಯದ ನಿಷೇಧ ಮತ್ತು 30 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇಂತಹದ್ದೊಂದು ಘೋಷಣೆ ಹೊರಬೀಳುತ್ತಿದ್ದಂತೇ ಡೆಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಲ್ಲಿ ಕಳಪೆ ಅಂಪಾಯರಿಂಗ್ ಮಾಡುವ ಅಂಪಾಯರ್ ಗಳಿಗೆ ಯಾವುದೇ ಶಿಕ್ಷೆಯಿರಲ್ಲ. ಆದರೆ ನಿಧಾನಗತಿಯ ಓವರ್ ಮಾಡಿದ ನಾಯಕನಿಗೆ ಶಿಕ್ಷೆಯಾಗುತ್ತದೆ ಎಂದು ವ್ಯಂಗ್ಯ ಮಾಡಿದೆ. ಐಪಿಎಲ್ 2024 ರಲ್ಲಿ ಡೆಲ್ಲಿ ಇನ್ನು ಎರಡು ಲೀಗ್ ಪಂದ್ಯಗಳನ್ನು ಆಡಬೇಕಾಗುತ್ತದೆ. ಈ ಪೈಕಿ ಒಂದಕ್ಕೆ ರಿಷಬ್ ಹೊರಗುಳಿಯಲಿದ್ದಾರೆ.