ವಾಷಿಂಗ್ಟನ್: ಅಫ್ಗಾನಿಸ್ತಾನದ ಪ್ರಭುತ್ವ ಸಾಧಿಸಿರುವ ತಾಲಿಬಾನ್ ಹೋರಾಟಗಾರರು 'ಅಮೆರಿಕ ನಿರ್ಮಿತ' ಸೇನಾ ಪಡೆಯ ಸಶಸ್ತ್ರ ವಾಹನಗಳಲ್ಲಿ ತಿರುಗುತ್ತಿರುವುದು, ಅಮೆರಿಕ ಪೂರೈಕೆ ಮಾಡಿರುವ ಬಂದೂಕುಗಳನ್ನು ಹಿಡಿದು ಸಾಗುತ್ತಿರುವುದು ವಿಡಿಯೊಗಳಲ್ಲಿ ದಾಖಲಾಗಿದೆ.
ಅಫ್ಗನ್ ಸರ್ಕಾರದ ಸೇನಾ ಪಡೆಗಳು ಪ್ರತಿರೋಧ ತೋರದೆ ಹಿಂದೆ ಉಳಿಯುತ್ತಿದ್ದಂತೆ ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ಗಳ ಮೇಲೂ ತಾಲಿಬಾನಿಗಳು ಹತ್ತಿರುವುದು ಅಮೆರಿಕಕ್ಕೆ ಇರುಸು ಮುರುಸು ತಂದಿದೆ.
ತಿಂಗಳ ಹೋರಾಟದಲ್ಲಿ ತಾಲಿಬಾನಿಗಳು ಸುಲಭವಾಗಿ ಅಫ್ಗಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಅಮೆರಿಕ ಪೂರೈಕೆ ಮಾಡಿರುವ ಶಸ್ತ್ರಗಳು, ಸಾಧನಗಳು, ವಾಹನಗಳು, ಯುದ್ಧ ಸಾಮಗ್ರಿಗಳನ್ನು ತಾಲಿಬಾನಿಗಳು ಅಫ್ಗನ್ ಸಶಸ್ತ್ರ ಪಡೆಗಳಿಂದ ವಶಕ್ಕೆ ಪಡೆದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಮತ್ತು ಫೋಟೊಗಳಲ್ಲಿ ತಾಲಿಬಾಲಿಗಳು ಅಮೆರಿಕದ ಎಂ4 ಮತ್ತು ಎಂ18 ರೈಫಲ್ಗಳನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ. ಎಂ24 ಸ್ನೈಪರ್ಗಳನ್ನು ಹಿಡಿದಿದ್ದಾರೆ ಹಾಗೂ ಅಮೆರಿಕ ಸೇನೆ ಬಳಸುವ ಹಮ್ವೀಸ್ (Humvees) ಮಿಲಿಟರಿ ಟ್ರಕ್ಗಳಲ್ಲಿ ಓಡಾಟ ನಡೆಸಿದ್ದಾರೆ. ಅಮೆರಿಕದ ವಿಶೇಷ ಪಡೆಗಳು ಬಳಸುವ ಸಮರ ಸಜ್ಜಿತ ಸಮವಸ್ತ್ರಗಳನ್ನೂ ತಾಲಿಬಾನಿಗಳು ಧರಿಸಿದ್ದಾರೆ.
20 ವರ್ಷಗಳ ನಿರಂತರ ಯುದ್ಧದ ಬಳಿಕ ಅಫ್ಗನ್ನಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಜೋ ಬೈಡನ್ ಎಡವಿದ್ದಾರೆ ಎಂದು ರಾಜಕೀಯ ಟೀಕಾಪ್ರಹಾರಗಳು ನಡೆಯುತ್ತಿವೆ. ಅಮೆರಿಕ ನಿರ್ಮಿತ ವಾಹನಗಳು, ಶಸ್ತ್ರಾಸ್ತ್ರಗಳನ್ನು ತಾಲಿಬಾಲಿಗಳು ಬಳಸುತ್ತಿರುವುದು ಟೀಕಾಕಾರರಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. 'ತಾಲಿಬಾನಿಗಳು ಹಿಂದೆಂದಿಗಿಂತಲೂ ಈಗ ಉತ್ತಮ ರೀತಿಯಲ್ಲಿ ಶಸ್ತ್ರ ಸಜ್ಜಿತರಾಗಿದ್ದಾರೆ. ಬೈಡನ್ ಅವರ ನಿರ್ಲಕ್ಷ್ಯಯುತ ಸೇನಾ ಹಿಂತೆಗೆತ ಪ್ರಕ್ರಿಯೆಗೆ ಧನ್ಯವಾದಗಳು' ಎಂದು ರಿಪಬ್ಲಿಕನ್ ಮುಖಂಡ ರೋನಾ ಮೆಕ್ಡ್ಯಾನಿಯಲ್ ಮೂದಲಿಸಿದ್ದಾರೆ.