ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚೀನಾವನ್ನು ಹಿಂದಿಕ್ಕಿ ಅಮೆರಿಕ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದರೆ, ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಸಾಧನೆಯ ಗರಿಯೊಂದಿಗೆ ವಿದಾಯ ಹೇಳಿತು.
ಜಪಾನ್ ರಾಜಧಾನಿ ಟೋಕಿಯೊದಲ್ಲಿ ಭಾನುವಾರ ಸಮಾರೋಪ ಸಮಾರಂಭ ನಡೆದಿದ್ದು, ಅಮೆರಿಕ 39 ಚಿನ್ನದ ಪದಕ ಸೇರಿದಂತೆ ಒಟ್ಟಾರೆ 113 ಪದಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಆರಂಭದಿಂದಲೇ ಅಗ್ರಸ್ಥಾನದಲ್ಲಿದ್ದ ಚೀನಾ ಕೊನೆಯ ದಿನ ಒಂದು ಚಿನ್ನದ ಪದಕದಿಂದ ಹಿಂದೆ ಬಿದ್ದು
ಎರಡನೇ ಸ್ಥಾನಕ್ಕೆ ಕುಸಿಯಿತು.
ಭಾರತ ಉಪಾಂತ್ಯ ದಿನ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಪದಕಗಳ ಸಾಧನೆ ಮಾಡಿತು. ಭಾರತ 1 ಚಿನ್ನ, 2 ಬೆಳ್ಳಿ, 4 ಕಂಚು ಸೇರಿದಂತೆ 7 ಪದಕ ಸಂಪಾದಿಸಿತು. ಈ ಮೂಲಕ ಲಂಡನ್ ಒಲಿಂಪಿಕ್ಸ್ ನಲ್ಲಿ 6 ಪದಕ ಗೆದ್ದಿದ್ದ ದಾಖಲೆಯನ್ನು ಹಿಂದಿಕ್ಕಿತು.
ಅಮೆರಿಕ 39, ಚಿನ್ನ, 41 ಬೆಳ್ಳಿ ಹಾಗೂ 33 ಕಂಚು ಸೇರಿದಂತೆ 113 ಪದಕ ಗೆದ್ದು ನಂ.1 ಸ್ಥಾನ ಗಳಿಸಿದರೆ, ಚೀನಾ 38 ಚಿನ್ನ, 32 ಬೆಳ್ಳಿ ಹಾಗೂ 18ಕಂಚು ಸೇರಿದಂತೆ 88 ಪದಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. ಆತಿಥೇಯ ಜಪಾನ್ 27 ಚಿನ್ನ, 14 ಬೆಳ್ಳಿ ಹಾಗೂ 17 ಕಂಚು ಸೇರಿದಂತೆ 58 ಪದಕದೊಂದಿಗೆ ಮೂರನೇ ಸ್ಥಾನ ಪಡೆಯಿತು.
ಬ್ರಿಟನ್ 22 ಚಿನ್ನ, 21, ಬೆಳ್ಳಿ, 22 ಕಂಚು ಸೇರಿದಂತೆ 65 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿತು. ಯಾವುದೇ ದೇಶವನ್ನು ಪ್ರತಿನಿಧಿಸದೇ ಒಲಿಂಪಿಕ್ಸ್ ಬ್ಯಾನರ್ ನಡಿ ಸ್ಪರ್ಧಿಸಿದ್ದ ತಂಡ 20 ಚಿನ್ನ, 28 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ 71 ಪದಕದೊಂದಿಗೆ 4ನೇ ಸ್ಥಾನ ಪಡೆದರೂ ಒಟ್ಟಾರೆ ಪದಕಗಳ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.