ವಾಷಿಂಗ್ಟನ್ : ವಿಚ್ಛೇದನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪಾಕಿಸ್ತಾನ ಮೂಲದ ಮಹಿಳೆ ತನ್ನ ಪತಿಯಿಂದ ಹತ್ಯೆಗೀಡಾಗಿರುವ ಘಟನೆ ಚಿಕಾಗೊದಲ್ಲಿ ನಡೆದಿದೆ.
ಸಾನಿಯಾ ಖಾನ್ (29) ಹತ್ಯೆಯಾದ ಮಹಿಳೆ. ಪಾಕಿಸ್ತಾನಿ ಅಮೆರಿಕನ್ ಸಾನಿಯಾ ಖಾನ್ ಅವರು ಈಚೆಗೆ ಚಿಕಾಗೊಗೆ ಬಂದಿದ್ದರು. ಮನೆಯಿಂದ ಹೊರಗಡೆ ಹೋಗುತ್ತಿದ್ದಾಗ ಆಕೆ ಮಾಜಿ ಪತಿ ರಹೀಲ್ ಅಹ್ಮದ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಚಿಕಾಗೋ ಪೊಲೀಸರು ಗಸ್ತಿನಲ್ಲಿದ್ದಾಗ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ವ್ಯಕ್ತಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಸ್ಥಳದಲ್ಲಿ ಬಿದ್ದಿದ್ದ ಗನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಜಾರ್ಜ್ಟೌನ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದ (2022ರ ವಾರ್ಷಿಕ ವರದಿ) ಜಾಗತಿಕ ಮಹಿಳೆಯರು, ಶಾಂತಿ ಮತ್ತು ಭದ್ರತಾ ಸೂಚ್ಯಂಕದಲ್ಲಿ 170 ದೇಶಗಳಲ್ಲಿ 167 ನೇ ಸ್ಥಾನದಲ್ಲಿರುವ ಪಾಕಿಸ್ತಾನದಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ದುರುಪಯೋಗವಾಗುತ್ತಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ (ಹೆಚ್ಆರ್ಡಬ್ಲ್ಯೂ) ಉಲ್ಲೇಖಿಸಿದೆ.
ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿ, ಕೌಟುಂಬಿಕ ಹಿಂಸಾಚಾರ ಮತ್ತು ಬಲವಂತದ ಮದುವೆ ಸೇರಿದಂತೆ ಹೆಣ್ಣಿನ ಮೇಲಿನ ದೌರ್ಜನ್ಯ ಪಾಕಿಸ್ತಾನದಾದ್ಯಂತ ಸಾಮಾನ್ಯವಾಗಿದೆ ಎಂದು ಹೆಚ್ಆರ್ಡಬ್ಲ್ಯೂ ತಿಳಿಸಿದೆ.