ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದಾದರೂ ಇದನ್ನು ಇಷ್ಟಪಟ್ಟು ತಿನ್ನುವವರು ಕಡಿಮೆಯೆಂದೇ ಹೇಳಬಹುದು. ಹಾಗಲಕಾಯಿಯಿಂದ ಆರೋಗ್ಯಕ್ಕೆ ಬಹಳ ಉಪಯೋಗಗಳಿದ್ದು ಮಧುಮೇಹಿಗಳಿಗೆ ಉತ್ತಮ ಔಷಧವೂ ಆಗಿದೆ. ಹೀಗೆ ಕಹಿಯಾದ ಹಾಗಲಕಾಯಿಯನ್ನು ರುಚಿಯಾದ ಸ್ಟಫ್‌ನಿಂದ ತುಂಬಿದರೆ ಊಟದ ಜೊತೆ ಚೆನ್ನಾಗಿರುತ್ತದೆ. ಸ್ಟಫ್ ಮಾಡಿದ ಹಾಗಲಕಾಯಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳುವುದಕ್ಕಾಗಿ ಈ ಕೆಳಗಿನ ವಿಧಾನವನ್ನು ನೋಡಿ.
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ - 2
ಈರುಳ್ಳಿ - 1
ಬೆಳ್ಳುಳ್ಳಿ - 4 ಎಸಳು
ಅಚ್ಚಖಾರದ ಪುಡಿ - ಸ್ವಲ್ಪ
ಗರಂ ಮಸಾಲಾ - ಸ್ವಲ್ಪ
ಉಪ್ಪು - ರುಚಿಗೆ
ಕಾಯಿತುರಿ - 1/4 ಕಪ್
ಶೇಂಗಾ - 2-3 ಚಮಚ
ಗಸಗಸೆ - 2 ಚಮಚ
ಹಸಿಮೆಣಸು - 1-2
ಎಳ್ಳು - 2 ಚಮಚ
ಜೀರಿಗೆ - 2 ಚಮಚ
ಸಾಸಿವೆ - 1 ಚಮಚ
ಎಣ್ಣೆ - ಸ್ವಲ್ಪ
ಮಾಡುವ ವಿಧಾನ:
ಹಾಗಲಕಾಯಿಯ ಸಿಪ್ಪೆಯನ್ನು ತೆಳ್ಳೆಗೆ ತೆಗೆದು ಅದನ್ನು 3-4 ಭಾಗಗಳನ್ನಾಗಿ ಕತ್ತರಿಸಿ. ನಂತರ ಅದರಲ್ಲಿರುವ ಬೀಜವನ್ನು ತೆಗೆಯಿರಿ. ಸ್ವಲ್ಪ ಉಪ್ಪು ಮತ್ತು ಚಿಟಿಕೆ ಅರಿಶಿಣವನ್ನು ಕತ್ತರಿಸಿದ ಹಾಗಲಕಾಯಿಗೆ ಸವರಿಡಿ. ಸ್ವಲ್ಪ ಸಮಯದ ನಂತರ ಇದನ್ನು ಹಿಂಡಿದರೆ ಕಹಿಯ ಅಂಶ ಕಡಿಮೆಯಾಗುತ್ತದೆ. ಶೇಂಗಾ, ಬಿಳಿ ಎಳ್ಳು, ಗಸಗಸೆ ಮತ್ತು ಕಾಯಿತುರಿಯನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಮಿಕ್ಸಿ ಜಾರ್‌ಗೆ ಹಸಿಮೆಣಸು, ಬೆಳ್ಳುಳ್ಳಿ ಮತ್ತು ಹುರಿದಿಟ್ಟ ಮಿಶ್ರಣವನ್ನು ಸೇರಿಸಿ ನೀರನ್ನು ಬಳಸದೇ ರುಬ್ಬಿಕೊಳ್ಳಿ.
ಒಂದು ಪ್ಯಾನ್ ಅನ್ನು ತೆಗೆದುಕೊಂಡು 2-3 ಚಮಚ ಎಣ್ಣೆಯನ್ನು ಹಾಕಿ ಈ ಮೊದಲೇ ಕತ್ತರಿಸಿಟ್ಟಿರುವ ಹಾಗಲಕಾಯಿಯನ್ನು ಪ್ಯಾನ್‌ನಲ್ಲಿ ಇರಿಸಿ ಸ್ವಲ್ಪ ಫ್ರೈ ಮಾಡಿ ಎತ್ತಿಡಿ. ನಂತರ ಅಗತ್ಯವಿದ್ದರೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಜೀರಿಗೆ ಮತ್ತು ಸಾಸಿವೆಯನ್ನು ಹಾಕಿ ಹುರಿದು ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಈ ಮೊದಲೇ ರುಬ್ಬಿದ ಮಿಶ್ರಣ ಮತ್ತು ಗರಂ ಮಸಾಲಾ ಪುಡಿ ಮತ್ತು ಅಗತ್ಯವಿರುವಷ್ಟು ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉರಿಯನ್ನು ಆಫ್ ಮಾಡಿ. ಹೀಗೆ ತಯಾರಿಸಿದ ಮಿಶ್ರಣವನ್ನು ಈ ಮೊದಲೇ ಫ್ರೈ ಮಾಡಿಟ್ಟ ಕತ್ತರಿಸಿದ ಹಾಗಲಕಾಯಿಯಲ್ಲಿ ತುಂಬಿ ಅವುಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿದರೆ ರುಚಿಯಾದ ಸ್ಟಫ್ ಮಾಡಿದ ಹಾಗಲಕಾಯಿ ಸಿದ್ಧವಾಗುತ್ತದೆ.