ಇಂದಿನ ಪ್ರಪಂಚದಲ್ಲಿ ಕಂಪ್ಯೂಟರ್ ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ಮುಂದೆ ಸಾಗುವುದಿಲ್ಲ ಎನ್ನುವಂತಾಗಿದೆ. ಹೀಗಿರುವಾಗ ಕಂಪ್ಯೂಟರ್ ಉದ್ಯೋಗಿಗಳಲ್ಲಿ ಮೊದಲು ಕಂಡುಬರುವ ದೂರು ಎಂದರೆ ಕಣ್ಣಿನ ದಣಿವು. ಸತತವಾಗಿ ಕಂಪ್ಯೂಟರ್ ಬಳಸುವ 50 ರಿಂದ 90% ಜನರಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸಂಭವಿಸುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.
ಈ ಸಮಸ್ಯೆಗಳು ದೈಹಿಕ ಆಯಾಸ, ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಸಂಖ್ಯೆಯ ಕೆಲಸದ ದೋಷಗಳನ್ನು ಉಂಟುಮಾಡುವುದರೊಂದಿಗೆ ಕಣ್ಣು ಕೆಂಪಾಗುವುದರಂತಹ ಸಣ್ಣ ಸಣ್ಣ ಕಿರಿಕಿರಿಗಳನ್ನೂ ಉಂಟುಮಾಡುತ್ತದೆ. ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.
*ಕಂಪ್ಯೂಟರ್ ಇರುವ ಸ್ಥಳದಲ್ಲಿ ಚೆನ್ನಾಗಿ ಬೆಳಕಿರಲಿ: ನೀವು ಕಂಪ್ಯೂಟರ್ ಬಳಸುವಾಗ ಆ ಸ್ಥಳದಲ್ಲಿ ಚೆನ್ನಾಗಿ ಬೆಳಕಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಬೆಳಕು ಹಿನ್ನೆಲೆಯ ಬೆಳಕಿಗಿಂತ ಕಡಿಮೆಯಿರಬೇಕು. ಕಂಪ್ಯೂಟರ್ ಬಳಸುವಾಗ ಅದರಿಂದ ಆದಷ್ಟು ದೂರ ಕುಳಿತುಕೊಳ್ಳಿ. ನಿರಂತರವಾಗಿ ಕಂಪ್ಯೂಟರ್ ಸ್ಕ್ರೀನ್ ನೋಡುವಿಕೆಯು ನಿಮ್ಮ ಕಣ್ಣುಗಳಿಗೆ ಶ್ರಮವನ್ನುಂಟುಮಾಡುತ್ತದೆ.
*20-20-20 ನಿಯಮವನ್ನು ಪಾಲಿಸಿ: ಕಂಪ್ಯೂಟರ್ ಪರದೆಯನ್ನು ನಿರಂತರವಾಗಿ ನೋಡುತ್ತಿರಬೇಡಿ. 20-20-20 ನಿಯಮವನ್ನು ಪಾಲಿಸಿ. ಪ್ರತಿ 20 ನಿಮಿಷಗಳಿಗೆ ವಿರಾಮವನ್ನು ತೆಗೆದುಕೊಳ್ಳಿ ಮತ್ತು ಕನಿಷ್ಟ 20 ಅಡಿ ದೂರವಿರುವ ವಸ್ತುವೊಂದನ್ನು 20 ಸೆಕೆಂಡುಗಳ ಕಾಲ ವೀಕ್ಷಿಸಿ. ಇದು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗಮನಹರಿಸುವಲ್ಲಿ ಕಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
*ಕಣ್ಣನ್ನು ಮಿಟುಕಿಸುತ್ತಿರಿ: ನೀವು ಕೆಲಸವನ್ನು ಮಾಡುತ್ತಿರುವಾಗ ಕಣ್ಣು ಮಿಟುಕಿಸಲು ಮರೆತುಬಿಡುವುದು ಸಹಜವಾಗಿದೆ. ಹಾಗೆ ಮರೆತಾಗ ನಿಮ್ಮ ಕಣ್ಣುಗಳನ್ನು ನಯವಾಗಿರಿಸುವ ಕಣ್ಣುಗಳ ಮೇಲ್ಮೈಯಲ್ಲಿರುವ ತೇವಾಂಶ ಆವಿಯಾಗುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ಒಣಗಿಸುತ್ತದೆ. ಇದು ಒಣ ಕಣ್ಣಿನ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ಆದ್ದರಿಂದ ಆಗಾಗ ಕಣ್ಣು ಮಿಟುಕಿಸುತ್ತಿರಲು ಮರೆಯಬೇಡಿ.
*ಕಂಪ್ಯೂಟರ್ ಗ್ಲಾಸ್ ಬಳಸಿ: ಕಣ್ಣಿನ ಆರೈಕೆಯ ವೃತ್ತಿಪರರು ಕಸ್ಟಮೈಸ್ ಮಾಡಿದ ಕಂಪ್ಯೂಟರ್ ಗ್ಲಾಸ್ ಬಳಸಿ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಅದನ್ನು ಧರಿಸಿಕೊಳ್ಳಿ. ನೀವು ಕನ್ನಡಕ ಅಥವಾ ಕಾಂಟೆಕ್ಟ್ ಲೆನ್ಸ್ ಅನ್ನು ಬಳಸುತ್ತಿರುವವರಾದರೆ ವಿಶೇಷವಾಗಿ ಮರೆಯದೇ ಇದನ್ನು ಪಾಲಿಸಬೇಕು.
*ಆಗಾಗ ವಿರಾಮವನ್ನು ತೆಗೆದುಕೊಳ್ಳಿ: ಸಂಶೋಧನೆಯೊಂದರ ಪ್ರಕಾರ ಕೆಲಸಗಾರರು ದಿನಕ್ಕೆ 15 ನಿಮಿಷಗಳ ವಿರಾಮವನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಅದು ಸಾಲುವುದಿಲ್ಲ ಆದ್ದರಿಂದ ಆಗಾಗ 5-10 ನಿಮಿಷಗಳ ವಿರಾಮವನ್ನು ತೆಗೆದುಕೊಂಡು ನಿಮ್ಮ ಕತ್ತು, ಕೈ, ಕಾಲು ಭುಜಗಳನ್ನು ಸ್ಟ್ರೆಚ್ ಮಾಡಿದರೆ ಒತ್ತಡ ಕಡಿಮೆ ಆಗುತ್ತದೆ.
*ನಿಮ್ಮ ಕಂಪ್ಯೂಟರ್‌ನ ಡಿಸ್ಪ್ಲೇ ಅನ್ನು ಬದಲಾಯಿಸಿ: ನೀವು ಹಳೆಯ ಮಾದರಿಯ ಕಂಪ್ಯೂಟರ್ ಅನ್ನು ಬಳಸುತ್ತಿದ್ದರೆ ಆ ಮಾನಿಟರ್‌ನಲ್ಲಿ CRT ಮಾದರಿಯನ್ನು ಬಳಸಲಾಗುತ್ತದೆ. ಅದು ನಿಮ್ಮ ಕಣ್ಣುಗಳಿಗೆ ಹಾನಿಕಾರಕವಾಗಿದ್ದು ಮಾನಿಟರ್ ಅನ್ನು LCD ಗೆ ಬದಲಾಯಿಸಿಕೊಳ್ಳಿ. ಅದು ಪ್ರತಿಫಲನ ವಿರೋಧಿ ಮೇಲ್ಮೈ ಅನ್ನು ಹೊಂದಿದ್ದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿದೆ.
ಈ ಉಪಯುಕ್ತ ಸಲಹೆಗಳನ್ನು ಅನುಸರಿಸಿ ಕಂಪ್ಯೂಟರ್ ಬಳಕೆಯಿಂದಾಗಿ ಬರುವ ಕಣ್ಣುಗಳ ಸಮಸ್ಯೆಗಳಿಂದ ದೂರವಿರಿ.