ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶದಿಂದ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಬಗ್ಗೆ ತಿಳಿಸಿರುವ ಅವರು, ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನ ಅಲ್ಪಸಂಖ್ಯಾತರನ್ನು ಬೆದರಿಸುವ ಹಾಗೂ ಅವರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿದೆ. ಇದು ಸಂಘ ಪರಿವಾರದ ರಾಜಕೀಯ ಹಿಂದುತ್ವದ ಅಜೆಂಡಾ ಆಗಿದೆ. ಇದನ್ನು ಸಹೃದಯ ಹಿಂದು ಬಾಂಧವರೆಲ್ಲರೂ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.
ಸ್ವ ಇಚ್ಛೆಯಿಂದ ಮತಾಂತರಗೊಳ್ಳುವ ಹಕ್ಕು ಸಂವಿಧಾನವೇ ನೀಡಿದೆ. ಇದರ ಹೊರತಾದ ಮತಾಂತರ ತಡೆಯಲು ಕಾನೂನು ಇದೆ. ಇರುವ ಕಾನೂನನ್ನು ಜಾರಿಗೆ ತರುವ ಪೊಲೀಸ್ ಇಲಾಖೆ ಮತ್ತು ತಪ್ಪು-ಒಪ್ಪುಗಳನ್ನು ಪರಿಶೀಲಿಸಿ ನ್ಯಾಯ ಒದಗಿಸುವ ನ್ಯಾಯಾಂಗದ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆ ಇಲ್ಲವೇ?. ವಿನಾಕಾರಣ ರಾಜ್ಯ ಸರ್ಕಾರ ತರಲು ಯತ್ನಿಸುತ್ತಿರುವ ಕಾಯಿದೆಯನ್ನು ನಮ್ಮ ಪಕ್ಷ ವಿರೋಧಿಸಲಿದೆ. ಅನ್ಯಾಯ-ದೌರ್ಜನ್ಯಕ್ಕೊಳಗಾಗುವ ಪ್ರತಿಯೊಬ್ಬ ಅಲ್ಪಸಂಖ್ಯಾತ ಬಂಧುವಿನ ಜೊತೆ ನಮ್ಮ ಪಕ್ಷ ನಿಲ್ಲಲಿದ್ದು ಈ ಕಾಯ್ದೆಯ ವಿರುದ್ದ ನಮ್ಮ ಪಕ್ಷ ಜನಾಂದೋಲನ ನಡೆಸಲಿದೆ ಎಂದು ಹೇಳಿದ್ದಾರೆ.
ಪಿಎಸ್‌ಐ ನೇಮಕ ಅಕ್ರಮದ ಕುರಿತು ಕಾಂಗ್ರೆಸ್ ಮೌನವಹಿಸಿಲ್ಲ. ಬಿಜೆಪಿ ಸಚಿವರು, ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಪಾತ್ರ ಇರುವ ಆರೋಪ ಕೇಳಿ ಬಂದಿರುವುದರಿಂದ ಸಿಐಡಿ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರುವುದಿಲ್ಲ. ಇದಕ್ಕಾಗಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯಿಸುತ್ತಲೇ ಇದೆ. ಅಪರಾಧಿಗಳಿಗೆ ಶಿಕ್ಷೆಯಾಗಿ, ಅರ್ಹರಿಗೆ ನ್ಯಾಯದೊರಕಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಅವರು ಆಗ್ರಹಿಸಿದರು.
ಕೆಲವು ನಕಲಿ ಹಿಂದುತ್ವವಾದಿಗಳು ಧರ್ಮದ ಹೆಸರಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆಜಾನ್‌ನಿಂದ ತೊಂದರೆ ಆಗುತ್ತಿದೆ ಎಂದು ಜನಸಾಮಾನ್ಯರು ಅರ್ಜಿ ಹಾಕಿಲ್ಲ. ಹಿಂದಿನಿಂದಲೂ ಹೊಂದಿಕೊಂಡು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮುಸಲ್ಮಾನರು, ಕ್ರೈಸ್ತರು ಪ್ರಾರ್ಥನೆ ಮಾಡುವಂತೆ ದೇವಸ್ಥಾನಗಳಲ್ಲಿ ಭಜನೆ ಮಾಡಿದರೆ ಬೇಡ ಎನ್ನುವವರು ಯಾರು? ಇನ್ನೊಬ್ಬರ ಆಚರಣೆ ತಡೆಯುವುದು ಏಕೆ? ಎಂದು ಅವರು ಪ್ರಶ್ನಿಸಿದರು.