ಬೆಂಗಳೂರು: ಪ್ರತಿ ವರ್ಷದ ವಾಡಿಕೆಯಂತೆ ಜೂನ್ ತಿಂಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುತ್ತಿದ್ದ ಮುಂಗಾರು ಮಳೆ ಈ ಬಾರಿ ಮೇ ತಿಂಗಳ್ಯಾಂತಕ್ಕೇ ರಾಜ್ಯಕ್ಕೆ ಕಾಲಿಡಲಿದೆ. ಜತೆಗೆ ಈ ಬಾರಿ ಮುಂಗಾರು ರಾಜ್ಯದಲ್ಲಿ ಉತ್ತಮ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಪ್ರತಿ ವರ್ಷ ಜೂನ್ 1 ಅಥವಾ ಅದರ ಬಳಿಕ ಕೇರಳದ ಕರಾವಳಿಗೆ ಮುಂಗಾರು ಪ್ರವೇಶವಾಗುತ್ತಿತ್ತು. ಈ ಬಾರಿ ಮೇ 27 ರಂದೇ ಕೇರಳದ ಕರಾವಳಿಗೆ ಮಾನ್ಸೂನ್ ಮಾರುತ ಅಪ್ಪಳಿಸಲಿದೆ. ಪರಿಣಾಮ ಮುಂದಿನ 3-4 ದಿನದ ಒಳಗಾಗಿ ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರನ್ನು ಮಾನ್ಸೂನ್ ಮಾರುತ ಪ್ರವೇಶಿಸಲಿದೆ ಎಂದು ಹಾವಾಮಾನ ಕೇಂದ್ರದ ಅಧಿಕಾರಿ ಸದಾನಂದ ಅಡಿಗ ತಿಳಿಸಿದ್ದಾರೆ.
ರಾಜ್ಯದ ಕರಾವಳಿಗೆ ತಲುಪಿದ ಬಳಿಕ ಸುಮಾರು 3 ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡನ್ನು ಮಾನ್ಸೂನ್ ಆವರಿಸಲಿದೆ. ಇದರಿಂದ ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಈ ಬಾರಿಯ ಮಾನ್ಸೂನ್ ಮಳೆ ಸುರಿಯಲಿದೆ ಎಂದು ಹೇಳಿದರು.
ಸಮುದ್ರದ ಮೇಲೆ ಬೀಸುವ ಗಾಳಿಯ ಆಧಾರದ ಮೇಲೆ ಯಾವ ರೀತಿಯ ಮಳೆಯಾಗಲಿದೆ ಎಂಬ ಅಂದಾಜು ಮಾಡಲಾಗುತ್ತದೆ. ಈ ಬಾರಿ ಭಾರತದ ಹವಾಮಾನದ ಮೇಲೆ ಲಾ ನಿನಾ (ಸಮುದ್ರಗಳಿಂದ ತಣ್ಣನೆಯ ಮಾರುತ ಬೀಸಲಿದೆ) ಪ್ರಭಾವವಿದೆ.
ಲಾ ನಿನಾ ಪ್ರಭಾವ ಇದ್ದಾಗ ಉತ್ತಮ ಮಳೆಯಾಗುವುದು ವಾಡಿಕೆ. ಎಲ್ ನಿನೊ ಎಂಬುದು ಸಮುದ್ರಗಳ ಮೇಲೆ ಬಿಸಿ ಗಾಳಿ ಬೀಸುತ್ತದೆಯಾದ್ದರಿಂದ ಆ ವರ್ಷ ಮಳೆ ಕಡಿಮೆಯಾಗಲಿದೆ ಎಂಬುದು ವಾದ. ಪ್ರಸ್ತುತ ಲಾ ನಿನಾ ಪರಿಣಾಮವಿರುವುದರಿಂದ ಮುಂಗಾರು ಮಳೆ ಉತ್ತಮವಾಗಿರುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಕೇಂದ್ರ ಕೂಡ ಇಂತಹದ್ದೇ ಮುನ್ಸೂಚನೆ ನೀಡಿದೆ ಎಂದು ಹವಾಮಾನ ಕೇಂದ್ರದ ವಿಜ್ಞಾನಿ ಎ. ಪ್ರಸಾದ್ ಮಾಹಿತಿ ನೀಡಿದ್ದಾರೆ.
ಅಸಾನಿ ಚಂಡಮಾರುತ ದುರ್ಬಲಗೊಂಡಿದ್ದರೂ ಅದೇ ಜಾಗದಲ್ಲಿ ಮೇಲ್ಮೈ ಸುಳಿಗಾಳಿಯೊಂದು ರೂಪುಗೊಂಡಿದೆ. ಇದರ ಪ್ರಭಾವ ರಾಜ್ಯದ ಮೇಲೆ ಇದ್ದು ಇನ್ನೂ ಮೂರ್ನಾಲ್ಕು ದಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆ ಬಳಿಕವೂ ಮಳೆಗೆ ಪೂರಕವಾದ ಹವಾಮಾನ ವ್ಯವಸ್ಥೆಗಳು ರೂಪುಗೊಳ್ಳುವ ಸಂಭವ ಹೆಚ್ಚಿದ್ದು, ಮುಂಗಾರು ಪೂರ್ವ ಮಳೆ ಮುಂಗಾರು ಪ್ರವೇಶಿಸುವ ತನಕವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಪ್ರಸಾದ್ ವಿವರಿಸಿದ್ದಾರೆ.
ಅಸನಿ ಚಂಡಮಾರುತದ ಪ್ರಭಾವದಿಂದ ಮಳೆ ಮತ್ತು ಮೋಡ ಕವಿದ ವಾತಾವರಣ ಉಂಟಾಗಿರುವ ಕಾರಣ ರಾಜ್ಯದ ಬೇಸಿಗೆ ಕಾಲ ಅಕಾಲಿಕವಾಗಿ ಕೊನೆಗೊಂಡಂತೆ ಆಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಬಿರು ಬೇಸಿಗೆಯ ಮೇ ತಿಂಗಳಲ್ಲೇ ಚಳಿಯ ವಾತಾವರಣ ಉಂಟಾಗಿದೆ.