ಮುಂಬೈ: ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಸಂವಹನ ಕೊರತೆಯಿದೆ, ಇಬ್ಬರ ನಡುವೆ ಮುಕ್ತ ಮಾತುಕತೆಯಿಲ್ಲ ಎನ್ನುವುದು ಈಗ ಮತ್ತೊಮ್ಮೆ ಬಯಲಾಗಿದೆ.
ರೋಹಿತ್ ರಂತಹ ಪ್ರತಿಭಾವಂತ ಬ್ಯಾಟ್ಸ್ ಮನ್ ರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳಲು ಸ್ವತಃ ಕೊಹ್ಲಿಗೇ ಆಸಕ್ತಿಯಿಲ್ಲವೇ? ಅವರ ಗಾಯದ ಬಗ್ಗೆ ಪ್ರಶ್ನೆ ಕೇಳಿದಾಗ ನನಗೆ ಆ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಕೊಹ್ಲಿ ಉತ್ತರಿಸಿರುವುದು ಈ ಅನುಮಾನಗಳಿಗೆ ಪುಷ್ಠಿ ನೀಡುತ್ತದೆ. ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯನ್ನರಿಂದ ಚೆನ್ನಾಗಿ ಚಚ್ಚಿಸಿಕೊಂಡ ಟೀಂ ಇಂಡಿಯಾಗೆ ರೋಹಿತ್ ರಂತಹ ಹೊಡೆಬಡಿಯ ಆರಂಭಿಕರ ಅಗತ್ಯವಿದ್ದೇ ಇದೆ. ಎದುರಾಳಿಗಳು ಕೊಹ್ಲಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ ರೋಹಿತ್ ಕೂಡಾ ಅಷ್ಟೇ ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಹಾಗಿರುವಾಗ ಆಸ್ಟ್ರೇಲಿಯಾದಂತಹ ಮಹತ್ವದ ಸರಣಿಗೆ ಅವರನ್ನು ಕರೆಸಿಕೊಳ್ಳಲು ಇಷ್ಟೊಂದು ಗಾಯದ ನಾಟಕ, ಉದಾಸೀನ ಪ್ರವೃತ್ತಿ ತೋರುತ್ತಿರುವುದೇಕೆ ಎಂದು ನೆಟ್ಟಿಗರೂ ಪ್ರಶ್ನೆ ಮಾಡುತ್ತಿದ್ದಾರೆ.