ಬೆಂಗಳೂರು: ವಿಶ್ವದಲ್ಲಿ ಗ್ರೇಟ್ ವಾಲ್ ಆಫ್ ಚೀನಾ ಬಿಟ್ಟರೆ, ಅಷ್ಟೊಂದು ಗಟ್ಟಿ ಗೋಡೆ ಎಂದರೆ ಇರುವುದು ಕ್ರಿಕೆಟ್ ನಲ್ಲಿ. ಅದೂ ರಾಹುಲ್ ದ್ರಾವಿಡ್ ರೂಪದಲ್ಲಿ ಎಂದು ಹಿಂದೊಮ್ಮೆ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದರು. ಮೊನ್ನೆ ದ.ಆಫ್ರಿಕಾದಲ್ಲಿ ಟೀಂ ಇಂಡಿಯಾ ಪರದಾಡುವಾಗ ದ್ರಾವಿಡ್ ಮತ್ತೆ ನೆನಪಾದರು.
ಕಾಮೆಂಟರಿಯಲ್ಲಿ ರಾಹುಲ್ ದ್ರಾವಿಡ್ ಹೊರತುಪಡಿಸಿ ಎಲ್ಲರೂ, ಎಲ್ಲಾ ಸಂದರ್ಭದಲ್ಲೂ ರಕ್ಷಣಾತ್ಮಕ ಆಟವಾಡಿದರೆ ಪ್ರಯೋಜನವಾಗದು ಎನ್ನುವುದು ಕಿವಿಗೆ ಬಿತ್ತು. ಅದು ನಿಜವೇ ದ್ರಾವಿಡ್ ರಂತೆ ಎದುರಾಳಿಗಳನ್ನು ಕಾಡಿ, ಹತಾಶೆಗೆ ನೂಕಿ ರನ್ ಕಲೆ ಹಾಕುವ ಕಲೆ ಭಾರತದ ಇನ್ನೊಬ್ಬ ಬ್ಯಾಟ್ಸ್ ಮನ್ ಕಲಿತಿಲ್ಲ.
ಚೇತೇಶ್ವರ ಪೂಜಾರರನ್ನು ಮತ್ತೊಬ್ಬ ದ್ರಾವಿಡ್ ಎಂದರು. ಹಾಗಿದ್ದರೂ ಅವರು ದ್ರಾವಿಡ್ ಆಗಲು ಸಾಧ್ಯವಿಲ್ಲ. ಯಾಕೆಂದರೆ ದ್ರಾವಿಡ್ ರಂತೆ ಇನ್ನೊಬ್ಬ ಬ್ಯಾಟ್ಸ್ ಮನ್ ಇರಲು ಸಾಧ್ಯವಿಲ್ಲ. ಪೂಜಾರ ಕೂಡಾ ದ್ರಾವಿಡ್ ರಂತೆ ರಕ್ಷಣಾತ್ಮಕವಾಗಿ ಆಡುತ್ತಾರೆ. ಆದರೆ ಅವರ ರಕ್ಷಣಾತ್ಮಕ ತಂತ್ರ ಭಾರತದ ಪಿಚ್ ಗಳಲ್ಲಿ ಕೆಲಸ ಮಾಡಿತು.
ಆದರೆ ದ.ಆಫ್ರಿಕಾ ಪಿಚ್ ಗಳಲ್ಲಿ ಆಡುವಾಗ ರಕ್ಷಣಾತ್ಮಕವಾಗಿ ಆಡುವುದರ ಜತೆಗೆ ರನ್ ಕಲೆ ಹಾಕುವುದನ್ನೂ ಮರೆಯಬಾರದು. ದ್ರಾವಿಡ್ ತಮ್ಮ ಜತೆಗಾರರು ಔಟಾಗುತ್ತಿದ್ದರೂ ವಿಚಲಿತರಾಗದ ಶಾಂತ ಮೂರ್ತಿ. ಈ ಶಾಂತ ಸ್ವಭಾವವಿದ್ದರೆ ಮಾತ್ರ ಟೆಸ್ಟ್ ಕ್ರಿಕೆಟ್ ನಲ್ಲಿ ಇನಿಂಗ್ಸ್ ಕಟ್ಟಲು ಸಾಧ್ಯ. ಆದರೆ ಭಾರತದ ಹುಡುಗರು ವಿಕೆಟ್ ಬೀಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡರು.
ತಾನು ಗಟ್ಟಿಯಾಗಿ ನಿಲ್ಲುವುದಲ್ಲದೆ, ಜತೆಗಾರನಿಗೂ ಧೈರ್ಯ ತುಂಬಿ ಕ್ರೀಸ್ ನಲ್ಲಿ ತಳವೂರುವುದು ದ್ರಾವಿಡ್ ಶೈಲಿ. ಅದೀಗ ಭಾರತಕ್ಕೆ ಅಗತ್ಯವಾಗಿ ಬೇಕಿದೆ. ಜತೆಯಾಟದ ಕೊರತೆಯಿಂದ ಮಾತ್ರವಲ್ಲ, ಜತೆಯಾಟ ಬೆಳೆಸುವ ದೃಢ ವಿಶ್ವಾಸದ ಆಟಗಾರನ ಕೊರತೆಯಿಂದ ಭಾರತ ಸೋತಿತು.
ದ್ರಾವಿಡ್ ಗಿದ್ದ ಇನ್ನೊಂದು ವಿಶಿಷ್ಟ ಶಕ್ತಿ ಎಂದರೆ ಎದುರಾಳಿಯನ್ನು ಹತಾಶೆಗೊಳಪಡಿಸುವುದು. ಅದನ್ನು ಮಾಡಿದರೆ ಬೌಲರ್ ಗಳನ್ನು ಅರ್ಧ ಗೆದ್ದಂತೆ. ಎಷ್ಟೇ ಚೆನ್ನಾಗಿ ಬಾಲ್ ಮಾಡುತ್ತಿದ್ದರೂ ತಾಳ್ಮೆಯಿಂದ ಸುಂದರ ಚಿತ್ರ ಬಿಡಿಸಿದಂತೆ ಎದುರಿಸುತ್ತಾ ಸಾಗಿದರೆ ಬೌಲರ್ ಗಳ ಹೊಟ್ಟೆಯುರಿಯುತ್ತದೆ. ಇದೇ ಸಂದರ್ಭದಲ್ಲಿ ಬೌಲರ್ ಗಳಿಂದ ತಪ್ಪುಗಳಾಗುತ್ತವೆ. ಆಗ ಸಹಜವಾಗಿ ರನ್ ಕದಿಯಬಹುದು. ಅದರಲ್ಲೂ ವಿಶೇಷವಾಗಿ ವಿದೇಶಿ ಪಿಚ್ ಗಳಲ್ಲಿ ಆಡುವ ದ್ರಾವಿಡ್ ರ ಒಂದು ಇನಿಂಗ್ಸ್ ಈಗಿನ ಟೀಂ ಇಂಡಿಯಾ ಹುಡುಗರಿಗೆ ಒಂದು ಪಾಠವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ