ತಂಡದ ಹೀನಾಯ ಸೋಲುಗಳ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಆ್ಯಂಗಲೋ ಮ್ಯಾಥ್ಯೂಸ್ ಅವರು ತಮ್ಮ ನಾಯಕನ ಪಟ್ಟವನ್ನು ಬಿಟ್ಟುಕೊಟ್ಟಿದ್ದರು. ನಂತರದ ದಿನಗಳಲ್ಲಿ ಶ್ರೀಲಂಕಾ ತಂಡ ನಾಯಕನ ಸ್ಥಾನಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿತ್ತು. ಆದರೆ ಆ ಬದಲಾವಣೆಗಳು ಸಫಲವಾಗದೇ ಇರುವ ಕಾರಣ ಮತ್ತೆ ಏಕದಿನ ತಂಡದ ನಾಯಕನ ಸ್ಥಾನವನ್ನು ಮ್ಯಾಥ್ಯೂಸ್ ಅವರಿಗೆ ನೀಡಿದೆ ಎನ್ನಲಾಗಿದೆ.
2017 ರಲ್ಲಿ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಕೆಳಗಿರುವ ತಂಡವೆಂದೇ ಕರೆಯಲ್ಪಡುವ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಎದುರಾದ ಹೀನಾಯ ಸೋಲಿನ ನಂತರ ಮ್ಯಾಥ್ಯೂಸ್ ಅವರಿಂದ ನಾಯಕನ ಪಟ್ಟವನ್ನು ಕ್ರಿಕೇಟ್ ಮಂಡಳಿ ಹಿಂಪಡೆದಿತ್ತು. ನಂತರ ಟೆಸ್ಟ್ ನಾಯಕನಾಗಿ ದಿನೇಶ್ ಚಾಂದಿಮಾಲ್ ಮತ್ತು ಏಕದಿನ ತಂಡಕ್ಕೆ ಉಪುಲ್ ತರಂಗ ಅವರನ್ನು ನೇಮಿಸಲಾಗಿತ್ತು. ನಂತರ ತಿಸರಾ ಪರೇರಾ ಅವರನ್ನು ಉಪುಲ್ ತರಂಗ ಅವರ ಬದಲು ನೇಮಕ ಮಾಡಲಾಗಿತ್ತು. ಆದರೆ ಇವರೂ ಸಹ ತಂಡವನ್ನು ಮುನ್ನಡೆಸುವಲ್ಲಿ ವೈಫಲ್ಯವನ್ನು ಕಂಡ ಕಾರಣ ಈಗ ಮತ್ತೆ ಮ್ಯಾಥ್ಯೂಸ್ ಮೊರೆ ಹೋಗಲಾಗಿದೆ.
ಕೇವಲ ಹೊಸಬರೇ ಹೆಚ್ಚಾಗಿರುವ ಶ್ರೀಲಂಕಾ ತಂಡದಲ್ಲಿ ಇರುವ ಕೆಲವೇ ಕೆಲವು ಅನುಭವಿ ಆಟಗಾರರಲ್ಲಿ ಮ್ಯಾಥ್ಯೂಸ್ ಒಬ್ಬರಾಗಿರುವುದರಿಂದ 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ವರೆಗೆ ಮ್ಯಾಥ್ಯೂಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ನಾನು ನಾಯಕನ ಸ್ಥಾನ ಬಿಟ್ಟುಕೊಟ್ಟಾಗ ಮತ್ತೆ ನಾಯಕನಾಗಬಹುದು ಎಂದುಕೊಂಡಿರಲಿಲ್ಲ ಎಂದು ಮ್ಯಾಥ್ಯೂಸ್ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.