ಕೊಲೊಂಬೋ: ಧೋನಿ ಕಾಲದ ಬಳಿಕ ಕುಲದೀಪ್ ಯಾದವ್ ಗೆ ಇನ್ನು, ಟೀಂ ಇಂಡಿಯಾದಲ್ಲಿ ಸ್ಥಾನವೇ ಇಲ್ಲವೇನೋ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇನ್ನೇನು ಗೇಟ್ ಪಾಸ್ ಆಗುತ್ತಾರೆಂದಾಗ ಶ್ರೀಲಂಕಾ ಸರಣಿಯ ಮೂಲಕ ಕುಲದೀಪ್ ಯಾದವ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ಮೊದಲ ಪಂದ್ಯದಲ್ಲೇ ತಂಡಕ್ಕೆ ಅಗತ್ಯವಾದ ಬ್ರೇಕ್ ಕೊಟ್ಟು 2 ವಿಕೆಟ್ ಕಬಳಿಸಿದ್ದ ಕುಲದೀಪ್ ಯಾದವ್ ತಮ್ಮ ಕಮ್ ಬ್ಯಾಕ್ ಗೆ ಸಹಾಯ ಮಾಡಿದ ಕೋಚ್ ರಾಹುಲ್ ದ್ರಾವಿಡ್ ರನ್ನು ನೆನೆಸಿಕೊಂಡಿದ್ದಾರೆ.
ಈ ಸರಣಿ ಆರಂಭಕ್ಕೂ ಮುನ್ನ ದ್ರಾವಿಡ್ ಸರ್ ಜೊತೆಗೆ 15 ದಿನ ಕಳೆದಿದ್ದೆ. ಆ ಸಂದರ್ಭದಲ್ಲಿ ಅವರು ನನಗೆ ಸಾಕಷ್ಟು ವಿಚಾರ ಹೇಳಿದ್ದರು. ಅವರು ನನ್ನಲ್ಲಿ ಸ್ಪೂರ್ತಿ ತುಂಬಿದರು. ಆಟವನ್ನು ಹೇಗೆ ಎಂಜಾಯ್ ಮಾಡಬೇಕು, ಫಲಿತಾಂಶದ ಬಗ್ಗೆ ಚಿಂತೆ ಮಾಡದೇ ಆಡುವುದು ಹೇಗೆ ಎಂದು ತಿಳಿಸಿಕೊಟ್ಟರು. ಇದರ ಫಲವೇ ನನಗೆ ಮೊದಲ ಪಂದ್ಯದಲ್ಲಿ ಯಶಸ್ಸು ಸಿಕ್ಕಿತು ಎಂದಿದ್ದಾರೆ.