ಟ್ರೆಂಟ್ ಬ್ರಿಡ್ಜ್: ಬರೋಬ್ಬರಿ ಎರಡು ವರ್ಷಗಳ ಬಳಿಕ ಕೆಎಲ್ ರಾಹುಲ್ ಟೀಂ ಇಂಡಿಯಾ ಟೆಸ್ಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದರು.
ಇಷ್ಟು ದಿನ ಸೀಮಿತ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೆಸ್ಟ್ ತಂಡಕ್ಕೆ ಅವರಿಗೆ ಮರು ಅವಕಾಶ ಸಿಕ್ಕಿರಲಿಲ್ಲ. ಪ್ರತಿಭಾವಂತ ಯುವ ಕ್ರಿಕೆಟಿಗ ಶುಬ್ನಂ ಗಿಲ್ ಗಾಯಗೊಂಡ ಹಿನ್ನಲೆಯಲ್ಲಿ ಇಂಗ್ಲೆಂಡ್ ಸರಣಿಗೆ ಅಕಸ್ಮಾತ್ತಾಗಿ ಅವರು ಮತ್ತೆ ಓಪನರ್ ಆಗಿ ಕಣಕ್ಕಿಳಿಯುವ ಪರಿಸ್ಥಿತಿ ಬಂದಿದೆ.
ಇದನ್ನು ಅವರೀಗ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ನಾನು ಟೆಸ್ಟ್ ತಂಡದಲ್ಲಿ ಅವಕಾಶಕ್ಕಾಗಿ ತಾಳ್ಮೆಯಿಂದ ಕಾದಿರುವೆ. ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳುವೆ ಎಂದಿದ್ದರು. ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಆಡಿದ ರೀತಿ ನೋಡಿದರೆ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ರೋಹಿತ್ ಜೊತೆ ರಾಹುಲ್ ಮೊದಲ ಇನಿಂಗ್ಸ್ ನಲ್ಲಿ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಬಂಡೆಯಂತೆ ನಿಂತು ಇನಿಂಗ್ಸ್ ಗೆ ಆಧಾರವಾಗುವುದರ ಮೂಲಕ ಮತ್ತೆ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ ರಾಹುಲ್.