ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಅಂತಿಮ ಮತ್ತು ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ.
ಕಾನ್ಪುರದ ಗ್ರೀನ್ ಪಿಚ್ ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಉಭಯ ತಂಡಗಳೂ ಸಿದ್ಧವಾಗಿವೆ. ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿವೆ. ಹಾಗಾಗಿ ಇಂದಿನ ಪಂದ್ಯ ನಿರ್ಣಾಯಕವೆನಿಸಲಿದೆ.
ಭಾರತ ಮೊದಲ ಪಂದ್ಯದಲ್ಲಿ ಮೈಮರೆತು ಸೋಲನ್ನಪ್ಪಿದರೂ, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದೆ. ಹಾಗಿದ್ದರೂ ಬ್ಯಾಟಿಂಗ್ ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸಿಲ್ಲ ಎನ್ನುವುದು ಚಿಂತೆಯ ವಿಷಯ.
ಭಾರತ ತಂಡ ಆಡುವ ಬಳಗದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆಯಾದರೂ, ಸ್ಪಿನ್ನರ್ ಅಕ್ಸರ್ ಪಟೇಲ್ ಬದಲಿಗೆ ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಯಾಕೆಂದರೆ ಇದು ಕುಲದೀಪ್ ಗೆ ತವರು ಮೈದಾನ. ಅದು ಬಿಟ್ಟರೆ ಆಟಗಾರರನ್ನು ಬದಲಿಸಿ ರಿಸ್ಕ್ ತೆಗೆದುಕೊಳ್ಳುವ ಕೆಲಸ ಕೊಹ್ಲಿ ಮಾಡಲಾರರು.
ನ್ಯೂಜಿಲೆಂಡ್ ಗೆ ನಾಯಕ ವಿಲಿಯಮ್ಸ್ ಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಫಾರ್ಮ್ ನದ್ದೇ ಚಿಂತೆ. ಬೌಲಿಂಗ್ ವಿಭಾಗದಲ್ಲಿ ಎದುರಾಳಿಗಳು ಇದುವರೆಗೆ ಗಮನಾರ್ಹ ಪ್ರದರ್ಶನವನ್ನೇ ನೀಡಿದ್ದಾರೆ. ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ