ಕೃಷ್ಣವೇಣಿ ಕೆ.
ದಿ ಓವಲ್: ಅದು 2008 ರ ಇಂಗ್ಲೆಂಡ್-ಭಾರತ ನಡುವೆ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯ. ಆಗಷ್ಟೇ ದೇಶ ಮುಂಬೈಯಲ್ಲಿ ಉಗ್ರರ ದಾಳಿಯಿಂದ ದುಃಖ, ಬೇಸರ, ಆಕ್ರೋಶದಲ್ಲಿತ್ತು. ಆ ದುಃಖವನ್ನು ಮರೆಸಲು ಸಾಧ್ಯವಾಗದೇ ಇದ್ದರೂ ಅದರ ನಡುವೆಯೂ ನಾವು ಹೆಮ್ಮೆಪಡುವಂತಹ ಗೆಲುವು ದಕ್ಕಿಸಿಕೊಟ್ಟಿದ್ದು ಸಚಿನ್ ತೆಂಡುಲ್ಕರ್.
ಎರಡನೇ ಇನಿಂಗ್ಸ್ ನಲ್ಲಿ ಅದುವರೆಗೆ ಸಚಿನ್ ತೆಂಡುಲ್ಕರ್ ದಾಖಲೆ ಅಷ್ಟೊಂದು ಚೆನ್ನಾಗಿರಲಿಲ್ಲ. ಅವರೂ ಅಂದು ತಮ್ಮ ಮೇಲಿದ್ದ ಅಪವಾದ ತೊಡೆದು ಹಾಕಿದರು. ಗೆಲುವಿಗೆ ಭಾರತಕ್ಕೆ ಅಂತಿಮ ದಿನ 387 ರನ್ ಗಳ ಬೃಹತ್ ಮೊತ್ತ ಮುಂದೆ ಇತ್ತು. ಅದುವರೆಗೆ ಭಾರತ ಕೊನೆಯ ದಿನ ಅಷ್ಟು ದೊಡ್ಡ ಮೊತ್ತ ಚೇಸ್ ಮಾಡಿದ್ದೇ ಇರಲಿಲ್ಲ. ಅಂದು ಟೆಸ್ಟ್ ಸ್ಪೆಷಲಿಸ್ಟ್ ರಾಹುಲ್ ದ್ರಾವಿಡ್ ಕೂಡಾ ಪೆವಲಿಯನ್ ಸೇರಿಕೊಂಡಿದ್ದರು. ಈ ವೇಳೆ ಬ್ಯಾಟಿಂಗ್ ಗೆ ಬಂದ ಸಚಿನ್ ದಿನವಿಡೀ ಬ್ಯಾಟಿಂಗ್ ಮಾಡಿದರು. ಕೊನೆಯವರೆಗೂ ಅಜೇಯರಾಗುಳಿದರು. ಅಂತಿಮವಾಗಿ ಗೆಲುವಿನ ರನ್ ಜೊತೆಗೆ ತಮ್ಮ ಶತಕವನ್ನೂ ಪೂರೈಸಿದರು. ಅಂದು ಅವರು ಅಜೇಯ 103 ರನ್ ಗಳಿಸಿದ್ದರು.
ಸಾಮಾನ್ಯವಾಗಿ ಯುವಕರಾಗಿದ್ದಾಗಿನಿಂದಲೂ ಸಚಿನ್ ಶತಕ ಗಳಿಸಿದಾಗ ಹಾರಿ, ಕುಣಿದು ಸಂಭ್ರಮಿಸುವವರಲ್ಲ. ಆದರೆ ಅಂದು ಮಾತ್ರ ಕುಣಿದು ಕುಪ್ಪಳಿಸಿದರು. ಅದಕ್ಕೆ ಕಾರಣ, ಅಂತಹದ್ದೊಂದು ದೊಡ್ಡ ಗೆಲುವು ಎನ್ನುವುದಕ್ಕಿಂತ ಉಗ್ರ ದಾಳಿಯಿಂದ ಕಂಗೆಟ್ಟಿದ್ದ ಭಾರತಕ್ಕೆ ತಾನು ಗೆಲುವಿನ ಖುಷಿ ನೀಡಿದ್ದೇನೆಂಬ ಸಂಭ್ರಮವೇ ಹೆಚ್ಚಾಗಿತ್ತು ಅವರ ಮುಖದಲ್ಲಿ. ಪಂದ್ಯದ ಬಳಿಕ ಕಣ್ಣೀರು ಹಾಕಿದ್ದ ಅವರು ಆ ಶತಕ, ಗೆಲುವನ್ನು ದೇಶಕ್ಕೆ, ಉಗ್ರರ ವಿರುದ್ಧ ಹೋರಾಡಿದ ವೀರರಿಗೆ ಅರ್ಪಿಸಿದ್ದರು. ಈ ಗೆಲುವು ಭಾರತದ ಕ್ರಿಕೆಟ್ ಚರಿತ್ರೆಯಲ್ಲೇ ಸ್ಮರಣೀಯ ಪಂದ್ಯವಾಗಿತ್ತು.
ಈಗಲೂ ಟೀಂ ಇಂಡಿಯಾ ಅಂತಹದ್ದೇ ಸ್ಥಿತಿಯಲ್ಲಿದೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ 444 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಈಗ 3 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನದಂತ್ಯಕ್ಕೆ 164 ರನ್ ಗಳಿಸಿದೆ. ಕೊಹ್ಲಿ ಅಜೇಯ 44, ಮೊದಲ ಇನಿಂಗ್ಸ್ ನ ಹೀರೋ ಅಜಿಂಕ್ಯಾ ರೆಹಾನೆ 20 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇವರಿಬ್ಬರ ಮೇಲೆ ಇಂದು ಕೊನೆಯ ದಿನದಲ್ಲಿ 280 ರನ್ ಗಳಿಸುವ ಹೊಣೆಯಿದೆ. ಅಂದು ಸಚಿನ್ ಮಾಡಿದಂತೆ ಇಂದು ಕೊಹ್ಲಿ ಗೆಲುವಿನ ಹೊಣೆ ಹೊತ್ತು ತಂಡ ಮುನ್ನಡೆಸಿದರೆ ಭಾರತಕ್ಕೆ ಮತ್ತೊಂದು ಐತಿಹಾಸಿಕ ಗೆಲುವು ಸಿಗಲಿದೆ. ಮೊನ್ನೆಯಷ್ಟೇ ನಡೆದ ಒಡಿಶಾ ರೈಲು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಕಪ್ಪು ಪಟ್ಟಿ ಧರಿಸಿ ಆಡುತ್ತಿರುವ ಆಟಗಾರರು ತಕ್ಕ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ವೈಯಕ್ತಿಕ ದಾಖಲೆಗಳು ಏನೇ ಇರಬಹುದು, ತಂಡಕ್ಕೆ ಇಂತಹ ಗೆಲುವು ಕೊಡಿಸಿದಾಗಲೇ ಒಬ್ಬ ಆಟಗಾರನ ಶ್ರೇಷ್ಠತೆಗೆ ಹೆಚ್ಚು ಹೊಳಪು ಬರುವುದು.