ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಎರಡೂ ತಂಡಗಳ ನಡುವೆ ಸ್ಕೋರ್ ಸಮಬಲವಾದಾಗ ಸೂಪರ್ ಓವರ್ ಮಾಡಲಾಯಿತು. ಇದರಲ್ಲೂ ಎರಡೂ ತಂಡಗಳು ಸಮನಾಗಿ ರನ್ ಗಳಿಸಿದವು. ಆಗ ಅತೀ ಹೆಚ್ಚು ಬೌಂಡರಿ ಸಾಧಿಸಿದ ಇಂಗ್ಲೆಂಡ್ ನ್ನು ವಿಜಯಿಯೆಂದು ಘೋಷಿಸಲಾಯಿತು.
ಆದರೆ ಸ್ಟೋಕ್ಸ್, ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ಮಿಡ್ ವಿಕೆಟ್ ಕಡೆಗೆ ಬಾಲ್ ತಳ್ಳಿದಾಗ ಮಾರ್ಟಿನ್ ಗುಪ್ಟಿಲ್ ಬಾಲ್ ತಡೆದು ವಿಕೆಟ್ ಕಡೆಗೆ ಎಸೆದರು. ಈ ವೇಳೆ ರನೌಟ್ ಆಗುವುದನ್ನು ತಪ್ಪಿಸಲು ಸ್ಟೋಕ್ಸ್ ಡೈವ್ ಹೊಡೆಯುವಾಗ ಬ್ಯಾಟ್ ಗೆ ತಗುಲಿದ ಬಾಲ್ ಫೈನ್ ಲೆಗ್ ನತ್ತ ಬೌಂಡರಿ ಗೆರೆ ದಾಟಿತು. ಆಗ ಇಂಗ್ಲೆಂಡ್ ಗೆ ಅಂಪಾಯರ್ 6 ರನ್ ನೀಡಿದರು. ನಿಜವಾಗಿ ಓವರ್ ಥ್ರೋ ಆಗಿದ್ದಕ್ಕೆ ಐದು ರನ್ ನೀಡಬೇಕಿತ್ತು. ಆದರೆ ಅಂಪಾಯರ್ 6 ರನ್ ನೀಡಿದ್ದರಿಂದ ಇಂಗ್ಲೆಂಡ್ ಗೆ ಕೊನೆಯ ಎರಡು ಬಾಲ್ ಗಳಲ್ಲಿ ಮೂರು ರನ್ ಗಳಿಸಿದರೆ ಸಾಕಿತ್ತು. ಅಂತಿಮವಾಗಿ ಸೂಪರ್ ಓವರ್ ಕೂಡಾ ಟೈ ಆಯಿತು. ಆಗ ಅತೀ ಹೆಚ್ಚು ಬೌಂಡರಿ ಗಳಿಸಿದ ಆಧಾರದಲ್ಲಿ ಇಂಗ್ಲೆಂಡ್ ಗೆದ್ದಿತು. ಒಂದು ವೇಳೆ ಇಂಗ್ಲೆಂಡ್ ಗೆ ಓವರ್ ಥ್ರೋ ರೂಪದಲ್ಲಿ ಆ ಬೌಂಡರಿ ಸಿಗದೇ ಇದ್ದರೆ ಗೆಲ್ಲುತ್ತಿರಲಿಲ್ಲವೇನೋ. ಅಂತೂ ಫೈನಲ್ ಪಂದ್ಯಕ್ಕೂ ವಿವಾದ ಅಂಟಿಕೊಂಡಿತು.