ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯವನ್ನು 67 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಗ್ರ ಬ್ಯಾಟ್ಸ್ ಮನ್ ಗಳ ಭರ್ಜರಿ ಆಟದಿಂದಾಗಿ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಆರಂಭಿಕರಾದ ಕೆಎಲ್ ರಾಹುಲ್ 91 ರನ್ ಗಳಿಸಿ ಕೊನೆಯ ಓವರ್ ನಲ್ಲಿ ಔಟಾಗಿ ಶತಕ ವಂಚಿತರಾದರು. ರಾಹುಲ್ 56 ಎಸೆತಗಳಿಂದ ಈ ಸಾಧನೆ ಮಾಡಿದರು. ರೋಹಿತ್ ಶರ್ಮಾ 34 ಎಸೆತಗಳಿಂದ 71 ರನ್ ಸಿಡಿಸಿದರೆ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಬ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದರು.
ಆದರೆ ನಂತರ ಬಂದ ವಿರಾಟ್ ಕೊಹ್ಲಿ ಕೇವಲ 29 ಎಸೆತಗಳಿಂದ 7 ಸಿಕ್ಸರ್ ಸಹಿತ 70 ರನ್ ಸಿಡಿಸಿ ಭಾರತದ ಮೊತ್ತ 240 ತಲುಪಲು ಕಾರಣರಾದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ದಿನ ನಾಯಕ ವಿರಾಟ್ ಕೊಹ್ಲಿಗೆ ವಿವಾಹ ವಾರ್ಷಿಕೋತ್ಸವವಾಗಿತ್ತು. ಹೀಗಾಗಿ ಗೆಲುವಿನ ಬಳಿಕ ಮಾತನಾಡಿದ ಕೊಹ್ಲಿ ಸರಣಿ ಗೆಲುವನ್ನು ನನ್ನ ಪತ್ನಿಗೆ ಅರ್ಪಣೆ ಎಂದಿದ್ದಾರೆ.