ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿ ಸಮಬಲಗೊಳಿಸಿದೆ.
ನಿನ್ನೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ 2 ರನ್ ಗಳ ಮುನ್ನಡೆಯೊಂದಿಗೆ ದಿನದಾಟ ಕೊನೆಗೊಳಿಸಿತ್ತು. ಇಂದು ಭರ್ತಿ 200 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿತ್ತು. ಭಾರತಕ್ಕೆ ಮೊದಲ ಇನಿಂಗ್ಸ್ ನಲ್ಲಿ 131 ರನ್ ಗಳ ಮುನ್ನಡೆಯಿದ್ದರಿಂದ 69 ರನ್ ಗಳ ಸುಲಭ ಗೆಲುವಿನ ಗುರಿ ಸಿಕ್ಕಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಮತ್ತೆ ಮಯಾಂಕ್ ಅಗರ್ವಾಲ್ (5 ರನ್) ಕೈ ಕೊಟ್ಟರು. ಅವರ ಹಿಂದೆಯೇ ಚೇತೇಶ್ವರ ಪೂಜಾರ ಕೂಡಾ 3 ರನ್ ಗೆ ವಿಕೆಟ್ ಒಪ್ಪಿಸಿದಾಗ ಆತಂಕ ಎದುರಾಯಿತು. ಆದರೆ ಮತ್ತೆ ಉತ್ತಮ ಆಟವಾಡಿದ ಶಬ್ನಂ ಗಿಲ್ ಅಜೇಯ 35 ರನ್ ಗಳಿಸಿದರೆ ನಾಯಕ ಅಜಿಂಕ್ಯಾ ರೆಹಾನೆ 27 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಎರಡೂ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯಾ ರೆಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಂತಾಯಿತು.