ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ.
ದಿನದಂತ್ಯಕ್ಕೆ ರಿಷಬ್ ಪಂತ್ 20 ಮತ್ತು ರವೀಂದ್ರ ಜಡೇಜಾ 3 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರು. ಈ ಪೈಕಿ ಮಯಾಂಕ್ 5 ರನ್ ಗೆ ವಿಕೆಟ್ ಒಪ್ಪಿಸಿದರು.
ಅದಾದ ಬಳಿಕ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 2 ರನ್ ಗೆ ಔಟಾದರೆ, ನಾಯಕ ಕೊಹ್ಲಿ 9 ರನ್ ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತ ಆರಂಭಿಕ ಆಘಾತ ಅನುಭವಿಸಿತು. ಆದರೆ ಇನ್ನೊಂದು ತುದಿಯಲ್ಲಿ ಕೆಎಲ್ ರಾಹುಲ್ ತಾಳ್ಮೆಯ ಆಟವಾಡುತ್ತಿದ್ದರು. ಹಾಗಿದ್ದರೂ ಅವರು 44 ರನ್ ಗಳಿಸಿ ಔಟಾದರು.
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರೆಹಾನೆ 88 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಗೆ 32 ರನ್ ಗಳಿಸಿದ ಹನುಮ ವಿಹಾರಿ ಉತ್ತಮ ಸಾಥ್ ನೀಡಿದರು. ವಿಂಡೀಸ್ ಪರ ಕೆಮರೋನ್ ರೋಚ್ 3 ಮತ್ತು ಗ್ಯಾಬ್ರಿಯಾಲ್ 2 ವಿಕೆಟ್ ಕಬಳಿಸಿದ್ದಾರೆ.