ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರೆಹಾನೆ ನಡುವೆ ಯಾರನ್ನು ಆಯ್ಕೆ ಮಾಡಬೇಕೆಂಬ ಉಭಯ ಸಂಕಟ ಎದುರಾಗಿದೆ.
ಯಾರನ್ನೇ ಆಯ್ಕೆ ಮಾಡಿದರೂ ಕೊಹ್ಲಿ ಮೇಲೆ ಟೀಕೆ ಗ್ಯಾರಂಟಿ. ಒಂದು ವೇಳೆ ಟೆಸ್ಟ್ ಅನುಭವದ ಆಧಾರದಲ್ಲಿ ಅಜಿಂಕ್ಯಾ ರೆಹಾನೆಯನ್ನು ಆಯ್ಕೆ ಮಾಡಿದರೆ ರೋಹಿತ್ ಶರ್ಮಾ ಅಭಿಮಾನಿಗಳು ಖಂಡಿತಾ ಇದು ಇಬ್ಬರ ನಡುವಿನ ವೈಮನಸ್ಯದ ಪರಿಣಾಮ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಹಾಗಂತ ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿರುವ ರೆಹಾನೆಯನ್ನು ತಂಡದಿಂದ ಕೈಬಿಡುವ ಹಾಗೂ ಇಲ್ಲ. ರೆಹಾನೆ ಈಗಾಗಲೇ ಅಭ್ಯಾಸ ಪಂದ್ಯದಲ್ಲಿಯೇ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್ ಗೆ ರೆಹಾನೆಯಂತಹ ತಾಳ್ಮೆಯಿಂದ ಆಡುವ ಆಟಗಾರನ ಅಗತ್ಯವಿದೆ. ಹೀಗಾಗಿ ಮಧ್ಯಮ ಕ್ರಮಾಂಕದ ಆಯ್ಕೆ ವಿಚಾರ ಕೊಹ್ಲಿಗೆ ತೂಗುಗತ್ತಿಯ ಮೇಲಿನ ನಡಿಗೆಯಂತಾಗಿದೆ.