ಮುಂಬೈ: ಇಂಗ್ಲೆಂಡ್ ವಿರುದ್ಧ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಇಂದು ನಡೆಯಲಿದೆ. ಎಲ್ಲರ ಕಣ್ಣು ಇದೀಗ ಕೊಹ್ಲಿ ಮೇಲಿದೆ.
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೊಹ್ಲಿ ಕೌಟುಂಬಿಕ ಕಾರಣಗಳಿಂದ ಕಳೆದ ಎರಡು ಪಂದ್ಯಗಳಿಗೆ ಗೈರಾಗಿದ್ದರು. ಅವರು ಮೂರನೇ ಪಂದ್ಯಕ್ಕೂ ಲಭ್ಯರಿರುವುದು ಅನುಮಾನ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ಸಿಗಬೇಕಾದರೆ ಇಂದು ಆಯ್ಕೆಗಾರರೇ ಹೇಳಬೇಕಿದೆ.
ಕಳೆದ ಪಂದ್ಯ ಮುಗಿದ ಬಳಿಕ ಕೋಚ್ ದ್ರಾವಿಡ್ ಗೆ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮುಂದಿನ ಪಂದ್ಯಕ್ಕೆ ಲಭ್ಯರಿರುತ್ತಾರಾ ಎಂದು ಪ್ರಶ್ನಿಸಲಾಯಿತು. ಈ ವೇಳೆ ಅವರು ಈ ಬಗ್ಗೆ ಇನ್ನೂ ಕೊಹ್ಲಿ ಜೊತೆ ಮಾತುಕತೆ ನಡೆಸಿಲ್ಲ ಎಂದಿದ್ದರು. ಹೀಗಾಗಿ ಕೊಹ್ಲಿ ಮರಳುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿರಲಿಲ್ಲ.
ಕೆಎಲ್ ರಾಹುಲ್ ಕಮ್ ಬ್ಯಾಕ್ ಸಾಧ‍್ಯತೆ
ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನೂ 9 ದಿನಗಳ ಅಂತರವಿದೆ. ಹೀಗಾಗಿ ಗಾಯಗೊಂಡು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಜಡೇಜಾ ಸದ್ಯಕ್ಕೆ ವಾಪಸ್ ಆಗುವ ಸಾಧ್ಯತೆಯಿಲ್ಲ. ಶುಬ್ಮನ್ ಗಿಲ್ ಗಾಯಗೊಂಡಿದ್ದರೂ ಗಂಭೀರವಲ್ಲದ ಕಾರಣ ತಂಡಕ್ಕೆ ಲಭ್ಯರಿರಲಿದ್ದಾರೆ.
ಆದರೆ ರಾಹುಲ್ ತಂಡಕ್ಕೆ ಬಂದರೆ ರಜತ್ ಪಟಿದಾರ್ ಅಥವಾ ಸರ್ಫರಾಜ್ ಖಾನ್ ತಂಡದಿಂದ ಹೊರಹೋಗಬಹುದು. ರಜತ್ ಪಟಿದಾರ್ ಗೆ ಈಗಾಗಲೇ ಒಂದು ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಅವರು ಬಳಸಿಕೊಳ್ಳಲಿಲ್ಲ. ಆದರೆ ಸರ್ಫರಾಜ್ ಖಾನ್ ಗೆ ಇದುವರೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಆಯ್ಕೆಗಾರರು ಯಾರನ್ನು ಉಳಿಸಕೊಳ್ಳುತ್ತಾರೆ ಕಾದು ನೋಡಬೇಕಿದೆ.