ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಈಗ ಲಾಂಗ್ ಬ್ರೇಕ್ ನ ಖುಷಿಯಲ್ಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ರಾಜಕೋಟ್ ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಇನ್ನೂ 10 ದಿನಗಳ ಬ್ರೇಕ್ ಇದೆ. ಬಿಡುವಿಲ್ಲದೇ ಆಡುತ್ತಿರುವ ಕ್ರಿಕೆಟಿಗರಿಗೆ ಈ ಸುದೀರ್ಘ ಅವಧಿ ಕುಟುಂಬದೊಂದಿಗೆ ಕಾಲ ಕಳೆಯಲು ಸಿಕ್ಕ ಉತ್ತಮ ಅವಕಾಶವಾಗಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿ ಇದಾಗಿರುವುದರಿಂದ ನಡುವೆ ಸುದೀರ್ಘ ಬ್ರೇಕ್ ನೀಡಲಾಗಿದೆ. ಇದರಿಂದಾಗಿ ಸಣ್ಣ ಪುಟ್ಟ ಗಾಯಗೊಂಡಿರುವ ಆಟಗಾರರು ಚೇತರಿಸಿಕೊಂಡು ಮತ್ತೆ ತಂಡಕ್ಕೆ ಮರಳಬಹುದಾಗಿದೆ. ಟೀಂ ಇಂಡಿಯಾ ಬ್ಯಾಟಿಗ ಶುಬ್ಮನ್ ಗಿಲ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಮೂರನೇ ಟೆಸ್ಟ್ ವೇಳೆಗೆ ಫಿಟ್ ಆಗಲಿದ್ದಾರೆ. ತೊಡೆ ನೋವಿನಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಕೆಎಲ್ ರಾಹುಲ್ ಕೂಡಾ ತಂಡಕ್ಕೆ ಮರಳುವ ಸಾಧ‍್ಯತೆಯಿದೆ.
ಮೊದಲ ಎರಡು ಟೆಸ್ಟ್ ಪಂದ್ಯಗಳ ಪೈಕಿ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದ್ದರೆ, ಎರಡನೇ ಪಂದ್ಯವನ್ನು ಭಾರತ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಸರಣಿ ಈಗ ಸಮಬಲಗೊಂಡಿದೆ. ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿಯಿದೆ.