ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ ಮತ್ತೆ ಆರಂಭಿಕರು ಕೈಕೊಟ್ಟಿದ್ದಾರೆ.
13 ರನ್ ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಬೇಗನೇ ನಿರ್ಗಮಿಸುವ ಮೂಲಕ ಸಂಕಷ್ಟ ತಂದಿಟ್ಟರು. ರಾಹುಲ್ 10 ರನ್, ಮಯಾಂಕ್ 7 ರನ್ ಗೆ ವಿಕೆಟ್ ಒಪ್ಪಿಸಿದರು.
ಇವರ ಬಳಿಕ ಜೊತೆಯಾಗಿರುವ ನಾಯಕ ವಿರಾಟ್ ಕೊಹ್ಲಿ-ಚೇತೇಶ್ವರ ಪೂಜಾರ ನಿನ್ನೆಯ ದಿನದಂತ್ಯಕ್ಕೆ ಹೆಚ್ಚಿನ ಅಪಾಯ ಸಂಭವಿಸಿದಂತೆ ನೋಡಿಕೊಂಡರು. ದಿನದಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸುವ ಮೂಲಕ 70 ರನ್ ಗಳ ಮುನ್ನಡೆ ಸಾಧಿಸಿತು. ಕೊಹ್ಲಿ 14, ಪೂಜಾರ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಇನಿಂಗ್ಸ್ ನಲ್ಲೂ ಇದೇ ಜೋಡಿ ಭಾರತಕ್ಕೆ ಆಧಾರವಾಗಿತ್ತು.
ಇದಕ್ಕೂ ಮೊದಲು ದ.ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 210 ರನ್ ಗಳಿಗೆ ಆಲೌಟ್ ಆಯಿತು. ವೇಗಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಗಳ ಗೊಂಚಲು ಪಡೆದರೆ, ಉಮೇಶ್, ಮೊಹಮ್ಮದ್ ಶಮಿ ತಲಾ 2, ಶ್ರಾದ್ಧೂಲ್ ಠಾಕೂರ್ 1 ವಿಕೆಟ್ ಪಡೆದರು. ಅಶ್ವಿನ್ ದುರದೃಷ್ಟವಶಾತ್ ವಿಕೆಟ್ ಗಳಿಸಲು ವಿಫಲರಾದರು.