ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಕುಸಿತ ಕಂಡ ಟೀಂ ಇಂಡಿಯಾ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಆಟದಿಂದಾಗಿ ಎದುರಾಳಿಗಳಿಗೆ ಗೆಲ್ಲಲು 289 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕ ಕೆಎಲ್ ರಾಹುಲ್ 6 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ಮೂರನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ 4 ರನ್ ಗೆ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು. ಇದರಿಂದಾಗಿ ಭಾರತ ಸಂಕಷ್ಟಕ್ಕೀಡಾಯಿತು.
ಬಳಿಕ ರೋಹಿತ್ ಶರ್ಮಾ ನಿಲ್ಲುವ ಸೂಚನೆ ನೀಡಿದರೂ 36 ರನ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜತೆಗೂಡಿದ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಶತಕದ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಶ್ರೇಯಸ್ ಅಯ್ಯರ್ 70 ರನ್ ಗಳಿಸಿದರೆ ಪಂತ್ 71 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಈ ಇಬ್ಬರ ಜೋಡಿ ಬೇರ್ಪಟ್ಟ ಬಳಿಕ ಬಂದ ಕೇದಾರ್ ಜಾಧವ್ ಉತ್ತಮ ಆಟ ಪ್ರದರ್ಶಿಸಿ 40 ರನ್ ಗಳಿಸಿದರೆ ರವೀಂದ್ರ ಜಡೇಜಾ 21 ರನ್ ಗಳಿಸಿದರು. ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು.