ದೆಹಲಿ: ನಿನ್ನೆ ಫೀಲ್ಡಿಂಗ್ ಮಾಡುವಾಗ ದೆಹಲಿ ಮೈದಾನದಲ್ಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಆಕ್ಷೇಪ ಎತ್ತಿ ಪಂದ್ಯವನ್ನೇ ಸ್ಥಗಿತಗೊಳಿಸಿದ್ದ ಲಂಕಾ ಕ್ರಿಕೆಟ್ ತಂಡ ಇಂದು ಬ್ಯಾಟಿಂಗ್ ಮಾಡುವಾಗ ಸೊಲ್ಲೆತ್ತದೇ ದಿನದಾಟ ಮುಗಿಸಿದೆ.
ದಿನದಂತ್ಯಕ್ಕೆ ಲಂಕಾ 9 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ್ದು, ನಾಯಕ ಚಂಡಿಮಾಲ್ 147 ರನ್ ಗಳೊಂದಿಗೆ ಅಜೇಯರಾಗುಳಿದಿದ್ದಾರೆ. ಹಾಗಿದ್ದರೂ ಇನ್ನೂ 180 ರನ್ ಹಿನ್ನಡೆಯಲ್ಲಿದ್ದಾರೆ.
ಅದೇನೇ ಇದ್ದರೂ ಇಂದು ಮೊದಲ ಅವಧಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದ ಲಂಕಾ ಬ್ಯಾಟ್ಸ್ ಮನ್ ಗಳು ವಿಕೆಟ್ ನಷ್ಟವಿಲ್ಲದೇ ಸುಸ್ಥಿತಿಯಲ್ಲಿದ್ದರು. ಆದರೆ ಭೋಜನ ವಿರಾಮದ ಬಳಿಕ ಮೊದಲು ಶತಕ ಗಳಿಸಿದ್ದ ಆಂಜಲೋ ಮ್ಯಾಥ್ಯೂಸ್ ಅಶ್ವಿನ್ ಸ್ಪಿನ್ ಬಲೆಗೆ ಬಿದ್ದರು. 111 ರನ್ ಗಳಿಸಿ ಮ್ಯಾಥ್ಯೂಸ್ ಔಟಾದ ಬಳಿಕ ಸಮರವಿಕ್ರಮ ಕೊಂಚ ಹೊತ್ತು (33) ಪ್ರತಿರೋಧ ತೋರಿದರೂ ಪ್ರಯೋಜನವಾಗಲಿಲ್ಲ.
ಉಳಿದ ಬ್ಯಾಟ್ಸ್ ಮನ್ ಗಳನ್ನು ಭಾರತದ ಸ್ಪಿನ್ ಜೋಡಿ ಅಶ್ವಿನ್-ಜಡೇಜಾ ಎರಡಂಕಿ ಗಳಿಸುವ ಮೊದಲೇ ಪೆವಿಲಿಯನ್ ಗಟ್ಟಿದರು. ಹಾಗಿದ್ದರೂ ನಾಯಕ ಚಂಡಿಮಾಲ್ ಮಾತ್ರ ಕ್ರೀಸ್ ಗಂಟಿ ನಿಂತಿದ್ದಾರೆ. ಇವರಿಗೆ ಇದೀಗ ಕೊನೆಯ ಬ್ಯಾಟ್ಸ್ ಮನ್ ಲಕ್ಷಣ್ ಸಂಡಕನ್ ಸಾಥ್ ನೀಡಿದ್ದಾರೆ.
ಭಾರತದ ಪರ ಅಶ್ವಿನ್ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ತಲಾ 2 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ