ಕೋಲ್ಕೊತ್ತಾ: ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆದ್ದು ಯಶಸ್ವೀ ನಾಯಕ ಎಂದು ಸಾಬೀತುಪಡಿಸಿದ ಬಳಿಕ ಎಲ್ಲರೂ ನನ್ನನ್ನು ಮರೆತೇಬಿಟ್ಟರು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ, ಕ್ರಿಕೆಟಿಗ ಸೌರವ್ ಗಂಗೂಲಿ ಅಳಲು ತೋಡಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾರನ್ನು ಟೀಂ ಇಂಡಿಯಾದ ಮೂರೂ ಮಾದರಿಯ ನಾಯಕರಾಗಿ ಆಯ್ಕೆ ಮಾಡುವಲ್ಲಿ ಬಿಸಿಸಿಐ ಅಂದಿನ ಅಧ್ಯಕ್ಷರಾಗಿದ್ದ ಗಂಗೂಲಿ ಪಾತ್ರ ದೊಡ್ಡದು. ಅವರ ಒತ್ತಾಯದ ಮೇರೆಗೇ ರೋಹಿತ್ ಟೆಸ್ಟ್ ನಲ್ಲೂ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದರು ಎನ್ನಲಾಗಿದೆ. ಇದನ್ನು ಸ್ವತಃ ಗಂಗೂಲಿಯೇ ಹೇಳಿಕೊಂಡಿದ್ದರು.
ಆರಂಭದಲ್ಲಿ ರೋಹಿತ್ ಗೆ ಅಷ್ಟೊಂದು ಯಶಸ್ಸು ಸಿಕ್ಕಿರಲಿಲ್ಲ. ಆಗೆಲ್ಲಾ ಕೊಹ್ಲಿ ಅಭಿಮಾನಿಗಳು ಗಂಗೂಲಿಯನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದರು. ಚಿನ್ನದಂತಾ ನಾಯಕನನ್ನು ಕಿತ್ತು ಹಾಕಿ ರೋಹಿತ್ ಗೆ ನಾಯಕತ್ವ ಪಟ್ಟ ನೀಡಿದರು ಎಂದು ಗಂಗೂಲಿಯನ್ನು ಟೀಕಿಸುತ್ತಿದ್ದರು.
ಇದೀಗ ಟಿ20 ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಫೈನಲ್ ನಲ್ಲಿ ಗೆದ್ದು 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ಅಲ್ಲದೆ, 10 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನೂ ನೀಗಿಸಿದ್ದಾರೆ. ಆದರೆ ಈ ಯಶಸ್ಸಿನ ಬಳಿಕ ನನ್ನನ್ನು ಎಲ್ಲರೂ ಮರೆತು ಹೋದರು. ಅಂದು ತಮ್ಮನ್ನು ಟೀಕಿಸಿದವರು ಈಗ ರೋಹಿತ್ ಯಶಸ್ವಿಯಾದಾಗ ಯಾರೂ ಕ್ರೆಡಿಟ್ ಕೊಡುತ್ತಿಲ್ಲ ಎಂದು ಗಂಗೂಲಿ ಬೇಸರಿಸಿಕೊಂಡಿದ್ದಾರೆ.