ಮೊಹಾಲಿ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಕ್ಷರಶಃ ರುದ್ರತಾಂಡವ ಮೆರೆದಿದ್ದಾರೆ. ಇದು ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾರ ಮೂರನೇ ದ್ವಿಶತಕವಾಗಿದೆ.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಅಂತ್ಯದವರೆಗೆ ಅಜೇಯರಾಗುಳಿದು 208 ರನ್ ಸಿಡಿಸಿದ್ದಾರೆ. 153 ಎಸೆತಗಳಲ್ಲಿ 13 ಸಿಕ್ಸರ್, 12 ಬೌಂಡರಿಗಳು ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ ಸೇರಿತ್ತು.
ಇವರ ಈ ಭರ್ಜರಿ ಇನಿಂಗ್ಸ್ ನಿಂದಾಗಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿತು. ಆರಂಭಿಕ ಶಿಖರ್ ಧವನ್ 68, ಶ್ರೇಯಸ್ ಅಯ್ಯರ್ 89 ರನ್, ಧೋನಿ 12, ಹಾಗೂ ಹಾರ್ದಿಕ್ ಪಾಂಡ್ಯ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಪ್ರಥಮ ಪಂದ್ಯದಲ್ಲಿ ನಡೆದಿದ್ದಂತೆ ಸುರಂಗಾ ಲಕ್ಮಲ್ ಮ್ಯಾಜಿಕ್ ಈ ಪಂದ್ಯದಲ್ಲಿ ನಡೆಯಲು ರೋಹಿತ್ ಅವಕಾಶ ನೀಡಲಿಲ್ಲ. ಲಕ್ಮಲ್ ಒಂದೇ ಓವರ್ ನಲ್ಲಿ ಮೂರು ಸಿಕ್ಸರ್ ಸಹಿತ 26 ರನ್ ಸೂರೆಗೈದಿದ್ದು ಇದಕ್ಕೆ ಸಾಕ್ಷಿ. ಇನ್ನೊಂದೆಡೆ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅತ್ಯುತ್ತಮ ಸಾಥ್ ನೀಡಿದರು.
ರೋಹಿತ್ ಶತಕ ಗಳಿಸುತ್ತಿದ್ದಂತೆ ಪೆವಿಲಿಯನ್ ನಲ್ಲಿದ್ದ ಪತ್ನಿ ರಿತಿಕಾ ಸಚ್ ದೇವ್ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಇದನ್ನು ಕಂಡ ರೋಹಿತ್ ಪತ್ನಿಯೆಡೆಗೆ ಸಿಹಿ ಮುತ್ತೊಂದು ನೀಡಿ, ನಂತರ ತಮ್ಮ ಇನಿಂಗ್ಸ್ ನ ಗೇರ್ ಬದಲಾಯಿಸಿದರು. ನಂತರ ಮೈದಾನದ ತುಂಬಾ ಲೀಲಾಜಾಲವಾಗಿ ಸಿಕ್ಸರ್ ಗಳ ಸುರಿಮಳೆಯಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ