ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 132 ರನ್ ಗಳಿಂದ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಾವು ಅನುಭವಿಸುವ ಫಜೀತಿಯನ್ನು ವಿವರಿಸಿದ್ದಾರೆ.
ಪಂದ್ಯದ ಬಳಿಕ ವೀಕ್ಷಕ ವಿವರಣೆಕಾರರಾದ ಇರ್ಫಾನ್ ಪಠಾಣ್ ಬಳಿ ಸಂದರ್ಶನ ನೀಡಿದ ರೋಹಿತ್, ಪಂದ್ಯದ ಗೆಲುವಿನ ರೂವಾರಿಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಲು ಪೈಪೋಟಿ ನಡೆಸುವ ಬಗ್ಗೆ ತಮಾಷೆಯಾಗಿ ವಿವರಿಸಿದ್ದಾರೆ.
ಜಡೇಜಾ, ಅಶ್ವಿನ್ ಸದಾ ಒಂದೊಂದು ದಾಖಲೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಂದೂ ಹೀಗೇ ಆಗಿದೆ. ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 249 ವಿಕೆಟ್ ಗಳಿಸಿದ್ದರು. ಅವರು ಒಂದು ವಿಕೆಟ್ ಪಡೆದರೆ 250 ವಿಕೆಟ್ ದಾಖಲೆ ಮಾಡುತ್ತಿದ್ದರು. ಅತ್ತ ಅಶ್ವಿನ್ ಈ ಇನಿಂಗ್ಸ್ ನಲ್ಲಿ 4 ವಿಕೆಟ್ ಕಿತ್ತಿದ್ದರು. ಅವರಿಗೆ ಮತ್ತೊಂದು 5 ವಿಕೆಟ್ ಗಳ ಗೊಂಚಲು ಪಡೆದ ದಾಖಲೆ ಮಾಡುವ ಹಂಬಲ. ಹೀಗಾಗಿ ಇಬ್ಬರೂ ನನಗೆ ಬಾಲ್ ನೀಡಿ ಎಂದು ದಂಬಾಲು ಬೀಳುತ್ತಿದ್ದರು. ಅತ್ತ ಜಡೇಜಾ, ಇತ್ತ ಅಶ್ವಿನ್, ನಡುವೆ ನಾನೇನು ಮಾಡಲಿ? ಎಂದು ರೋಹಿತ್ ತಮಾಷೆಯಾಗಿ ಹೇಳಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.