ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದ ಗೌರವ ಭಾರತದ್ದಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 177 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರಮುಖ ಕಾರಣ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ದಾಳಿ. ಆರಂಭದಲ್ಲೇ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಿತ್ತು ಆಸ್ಟ್ರೇಲಿಯಾಗೆ ಆಘಾತವಿಕ್ಕಿದ್ದರು.
ಬಳಿಕ ಮಧ್ಯಮ ಕ್ರಮಾಂಕದ ಬೆನ್ನು ಮುರಿಯುವ ಜವಾಬ್ಧಾರಿಯನ್ನು ಜಡೇಜಾ ಮತ್ತು ಅಶ್ವಿನ್ ತೆಗೆದುಕೊಂಡರು. ಬಹಳ ದಿನಗಳ ನಂತರ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಜಡೇಜಾ ಮೊದಲ ಪಂದ್ಯದಲ್ಲೇ 5 ವಿಕೆಟ್ ಕಿತ್ತು ಗಮನ ಸೆಳೆದರು. ಅದರಲ್ಲೂ ಸ್ಟೀವ್ ಸ್ಮಿತ್ ರನ್ನು ಬೌಲ್ಡ್ ಮಾಡಿದ ರೀತಿಗೆ ಸ್ವತಃ ಸ್ಮಿತ್ ಇಂಪ್ರೆಸ್ ಆದರು. ಇನ್ನೊಂದೆಡೆ ಜಡೇಜಾಗೆ ತಕ್ಕ ಸಾಥ್ ನೀಡಿದ ಅಶ್ವಿನ್ 3 ವಿಕೆಟ್ ಕಿತ್ತು ಗಮನ ಸೆಳೆದರು.
ಬೌಲಿಂಗ್ ನಲ್ಲಿ ಜಡೇಜಾ 5 ವಿಕೆಟ್ ಕಿತ್ತು ಮಿಂಚಿದರೆ ಬ್ಯಾಟಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ ಶೈನ್ ಆದರು. ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ರೋಹಿತ್-ರಾಹುಲ್ ಜೋಡಿ ಉತ್ತಮ ಆರಂಭ ನೀಡಿತು. ಆದರೆ ದಿನದಾಟಕ್ಕೆ ಕೆಲವೇ ಕ್ಷಣವಿದ್ದಾಗ 20 ರನ್ ಗಳಿಸಿದ್ದ ರಾಹುಲ್ ಔಟಾದರು. ಆಗ ಭಾರತದ ಮೊತ್ತ 76 ರನ್ ಆಗಿತ್ತು. ಇನ್ನೊಂದೆಡೆ ಸತತ ಎರಡು ಬೌಂಡರಿ ಮೂಲಕವೇ ಖಾತೆ ತೆರೆದಿದ್ದ ರೋಹಿತ್ 56 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಹುಲ್ ಔಟಾದ ಬಳಿಕ ನೈಟ್ ವಾಚ್ ಮನ್ ಆಗಿ ಕ್ರೀಸ್ ಗೆ ಬಂದ ಅಶ್ವಿನ್ ಇನ್ನೂ ಖಾತೆ ತೆರೆಯಬೇಕಿದೆ. ಆಸೀಸ್ ಪರ ಟಾಡ್ ಮುರ್ಫಿ ಏಕೈಕ ವಿಕೆಟ್ ಕಬಳಿಸಿದ್ದಾರೆ. ಇದೀಗ ಭಾರತ 100 ರನ್ ಗಳ ಹಿನ್ನಡೆಯಲ್ಲಿದೆ.