ಕೋಲ್ಕೊತ್ತಾ: ಐಪಿಎಲ್ 2024 ಕ್ಕೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಯುವ ಕ್ರಿಕೆಟಿಗ ಹಾಗೂ ಕೆಕೆಆರ್ ತಂಡದ ಹೊಡೆಬಡಿಯ ಆಟಗಾರ ರಿಂಕು ಸಿಂಗ್ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಪಿಎಲ್ ಗೆ ತಯಾರಿ ನಡೆಸುತ್ತಿರುವ ರಿಂಕು ಸಿಂಗ್ ಮೈದಾನವೊಂದರಲ್ಲಿ ನೆಟ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಅವರು ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಅವರು ಹೊಡೆದ ಚೆಂಡು ಅಲ್ಲೇ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದು ಪುಟ್ಟ ಬಾಲಕನೊಬ್ಬನ ತಲೆಗೆ ಬಡಿದಿದೆ.
ತಕ್ಷಣವೇ ರಿಂಕು ಸಿಂಗ್ ತಮ್ಮ ಸಂಗಡಿಗರಿಗೆ ಆ ಬಾಲಕನನ್ನು ಕರೆತರಲು ಹೇಳಿದ್ದಾರೆ. ಬಳಿಕ ಆ ಹುಡುಗನ ಬಳಿ ಹೋಗಿ ಪುಟ್ಟ ನಿನಗೆ ಏನೂ ಆಗಿಲ್ವಲ್ಲ? ಎಲ್ಲಿ ಏಟಾಗಿದೆ ನೋಡೋಣ ಎಂದು ತಾವೇ ಗಾಯ ಪರಿಶೀಲಿಸಿದ್ದಾರೆ. ಬಳಿಕ ಆತನಿಗೆ ತಾವೇ ಪ್ರಥಮ ಚಿಕಿತ್ಸೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಎಲ್ಲಾ ಸರಿ ಹೋಗುತ್ತೆ ಏನೂ ಆಗಲ್ಲ ಎಂದು ಧೈರ್ಯ ತುಂಬಿದ್ದಾರೆ. ಜೊತೆಗೆ ಕ್ಷಮೆಯನ್ನೂ ಕೇಳಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೇ ಆ ಹುಡುಗನಿಗೆ ಏನು ಬೇಕು ಎಂದು ಕೇಳಿದ್ದಾರೆ. ಆತ ಹಸ್ತಾಕ್ಷರ ಕೇಳಿದಾಗ ತಮ್ಮದೇ ಟೋಪಿಯೊಂದನ್ನು ನೀಡಿ ಅದಕ್ಕೆ ಹಸ್ತಾಕ್ಷರ ಮಾಡಿ ಕೊಟ್ಟಿದ್ದಾರೆ. ರಿಂಕು ಸಿಂಗ್ ರ ಈ ವರ್ತನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.