ಮುಂಬೈ: ಐಪಿಎಲ್ 2024 ಆರಂಭಕ್ಕೆ ಕೆಲವೇ ಕ್ಷಣಗಳ ಮೊದಲು ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಶಾಕ್ ಕೊಟ್ಟಿದ್ದಾರೆ. ಆರಂಭದ ಎರಡು ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ.
ಸೂರ್ಯಕುಮಾರ್ ಯಾದವ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರಷ್ಟೇ. ಇತ್ತೀಚೆಗಷ್ಟೇ ಅವರಿಗೆ ಹರ್ನಿಯಾಗೆ ಶಸ್ತ್ರಚಿಕಿತ್ಸೆಯಾಗಿತ್ತು. ಇದಾದ ಬಳಿಕ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಿಗದೇ ಐಪಿಎಲ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.
ಸದ್ಯಕ್ಕೆ ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಮೊದಲ ಎರಡು ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಮಾರ್ಚ್ 24 ರಂದು ಅಹಮ್ಮದಾಬಾದ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಪಂದ್ಯವಿದೆ. ಇದಾದ ಬಳಿಕ ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್ ಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯವಿದೆ. ಈ ಎರಡೂ ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಲಭ್ಯರಿರುವುದಿಲ್ಲ.
ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ಕೊಟ್ಟ ಮೇಲೆ ಬೇಸರಿಸಿಕೊಂಡವರಲ್ಲಿ ಸೂರ್ಯಕುಮಾರ್ ಯಾದವ್ ಕೂಡಾ ಒಬ್ಬರು. ಇದೀಗ ಸೂರ್ಯಕುಮಾರ್ ಮೊದಲ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ. ಈಗಾಗಲೇ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಕ್ಯಾಂಪ್ ಗೆ ಬಂದಿದ್ದಾರೆ.