ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಕುಟುಂಬದ ಬಿರುಕು ಬೀದಿಗೆ ಬಿದ್ದಿದೆ. ತಂದೆ ವಿರುದ್ಧವೇ ಜಡೇಜಾ ಧ‍್ವನಿಯೆತ್ತಿದ್ದಾರೆ.
ರವೀಂದ್ರ ಜಡೇಜಾ ತಂದೆ ಅನಿರುದ್ಧ್ ಸಿಂಹ್ ಸೊಸೆ ರಿವಾಬ ಜಡೇಜಾ ಬಗ್ಗೆ ಸಂದರ್ಶನವೊಂದರಲ್ಲಿ ಆರೋಪಗಳ ಸುರಿಮಳೆಗೈಯ್ದಿದ್ದರು. ರಿವಾಬ ಮನೆ ಒಡೆಯುವ ಕೆಲಸ ಮಾಡಿದ್ದಾರೆ ಎಂದಿದ್ದರು. ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿರುವ ಜಡೇಜಾ ಇದೆಲ್ಲಾ ಕಪೋಲ ಕಲ್ಪಿತ ಮಾತುಗಳು. ಅವರು ಹೇಳಿರುವುದು ಯಾವುದೂ ನಿಜವಲ್ಲ. ಇದೆಲ್ಲಾ ನನ್ನ ಪತ್ನಿಯ ಮಾನ ಕಳೆಯಲು ಮಾಡಿದ ಸುಳ್ಳು ಆರೋಪಗಳು ಎಂದಿದ್ದಾರೆ.
ಅನಿರುದ್ಧ್ ಸಿಂಹ ಆರೋಪಗಳೇನು?
ಗುಜರಾತೀ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಡೇಜಾ ತಂದೆ ಅನಿರುದ್ಧ್ ಸಿಂಹ ನನ್ನ ಮಗ ದೊಡ್ಡ ಕ್ರಿಕೆಟಿಗನಾದರೂ ನಾನು ಸರಳ ಜೀವನ ಮಾಡುತ್ತಿದ್ದೇನೆ. ನನ್ನ ಮಗನಿಗೆ ಸ್ವಂತ ಫಾರ್ಮ್ ಹೌಸ್ ಇದ್ದರೂ ನಾನು 2 ಬಿಎಚ್ ಕೆ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿದ್ದೇನೆ. ನನಗೆ ಹಳ್ಳಿಯಲ್ಲಿ ಸ್ವಲ್ಪ ಜಮೀನಿದೆ. ನಾನು ನನ್ನ ಪತ್ನಿಯ 20 ಸಾವಿರ ರೂ. ಪೆನ್ಷನ್ ನಿಂದ ಮನೆ ನಿರ್ವಹಿಸುತ್ತಿದ್ದೇನೆ. ನಾನು ಏಕಾಂಗಿಯಾಗಿ ನನ್ನ 2 ಬಿಎಚ್ ಕೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ನನಗೆ ಅಡುಗೆ ಮಾಡಲು ಒಬ್ಬ ಸಹಾಯಕಿ ಇದ್ದಾಳೆ. ನನ್ನ ಜೀವನವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಎರಡು ಬೆಡ್ ರೂಂ ಮನೆಯಲ್ಲೂ ರವೀಂದ್ರಗೆ ಪ್ರತ್ಯೇಕ ಕೋಣೆಯಿದೆ ಎಂದಿದ್ದಾರೆ.
ಅಷ್ಟೇ ಅಲ್ಲ ತನ್ನ ಮತ್ತು ಮಗಳ ಜೊತೆ ಪುತ್ರ ರವೀಂದ್ರ ಸಂಬಂಧ ಚೆನ್ನಾಗಿಲ್ಲ ಎಂದೂ ಹೇಳಿದ್ದಾರೆ. ನಾನು ಯಾವತ್ತೂ ರವೀಂದ್ರನನ್ನು ಕರೆ ಮಾಡಲ್ಲ, ನನಗೆ ಅವನು ಬೇಡ. ಅವನು ನನ್ನ ತಂದೆಯಲ್ಲ, ನಾನು ಅವನ ತಂದೆ. ಅವನೇ ನನಗೆ ಕರೆ ಮಾಡಬೇಕು. ಇದೆಲ್ಲಾ ನೆನೆಸಿಕೊಂಡರೆ ನನಗೆ ಅಳು ಬರುತ್ತದೆ. ಅವನ ಸಹೋದರಿಯೂ ರಕ್ಷಾಬಂಧನ ದಿನ ಸಹೋದರನನ್ನು ನೆನೆದು ಕಣ್ಣೀರಿಡುತ್ತಾಳೆ ಎಂದಿದ್ದಾರೆ.
ರವೀಂದ್ರ ಜಡೇಜಾರನ್ನು ಕ್ರಿಕೆಟಿಗನಾಗಿ ಮಾಡಲು ನಾವು ತುಂಬಾ ಕಷ್ಟಪಟ್ಟಿದ್ದೇವೆ. ದುಡಿಮೆಗಾಗಿ ನಾನು 20 ಲೀ. ಹಾಲಿನ ಕ್ಯಾನ್ ಭಜದಲ್ಲಿ ಹೊತ್ತು ಮಾರಾಟಕ್ಕೆ ಹೋಗುತ್ತಿದ್ದೆ. ವಾಚ್ ಮನ್ ಆಗಿಯೂ ಕೆಲಸ ಮಾಡಿದ್ದೇನೆ. ನಾವು ತುಂಬಾ ಬಡ ಕುಟುಂಬದಿಂದ ಬಂದವರು. ಅವನಿಗಾಗಿ ಅವನ ತಂಗಿ ನನಗಿಂತ ಹೆಚ್ಚು ಮಾಡಿದ್ದಾಳೆ. ಅವನನ್ನು ಮಗನಂತೆ ಸಲಹಿದ್ದಾಳೆ. ಆದರೆ ಅವನು ನಮ್ಮೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲ.
ಮದುವೆಯಾದ ಕೆಲವೇ ಸಮಯದಲ್ಲಿ ರವೀಂದ್ರನ ರೆಸ್ಟೋರೆಂಟ್ ಒಡೆತನದ ವಿಚಾರವಾಗಿ ಜಗಳವಾಗಿತ್ತು. ರಿವಾಬ ರೆಸ್ಟೋರೆಂಟ್ ತನ್ನ ಹೆಸರಿಗೆ ಬರೆಯಬೇಕು ಎಂದು ಜಗಳ ತೆಗೆದಿದ್ದಳು. ಹಾಗೆ ಮಾಡಿದರೆ ಎಲ್ಲವೂ ಸರಿಯಾಗಬಹುದೆಂದು ಅವನ ಸಹೋದರಿ ಸಹಿ ಹಾಕಲು ಒಪ್ಪಿಕೊಂಡಳು ಎಂದು ಅನಿರುದ್ಧ್ ಆರೋಪಗಳ ಸುರಿಮಳೆಗೈಯ್ದಿದ್ದಾರೆ.
ರವೀಂದ್ರ ಜಡೇಜಾ ತಿರುಗೇಟು
ಒಂದೆಡೆ ತಂದೆ ತನ್ನ ಹಾಗೂ ಪತ್ನಿ ಬಗ್ಗೆ ಆರೋಪ ಹೊರಿಸಿದ್ದರೆ ಇತ್ತ ಜಡೇಜಾ ತಿರುಗೇಟು ನೀಡಿದ್ದಾರೆ. ಈಗ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಕಪೋಲ ಕಲ್ಪಿತವಾಗಿರುವುದು. ನನ್ನ ಪತ್ನಿಯ ಹೆಸರಿಗೆ ಮಸಿ ಬಳಿಯಲು ಇಂತಹ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನನಗೂ ಹೇಳಲು ಹಲವು ವಿಚಾರಗಳಿವೆ. ಆದರೆ ಅದನ್ನೆಲ್ಲಾ ಸಾರ್ವಜನಿಕವಾಗಿ ಹೇಳಲು ಇಷ್ಟಪಡಲ್ಲ ಎಂದಿದ್ದಾರೆ.