ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗರಾದ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ 436 ರನ್ ಗಳಿಗೆ ಆಲೌಟ್ ಆಗಿತ್ತು. ಇದರಲ್ಲಿ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ ಮತ್ತು ಜಡೇಜಾ ರನ್ ಕೊಡುಗೆ ಮಹತ್ವದ್ದಾಗಿತ್ತು. ಜೈಸ್ವಾಲ್ 80 ರನ್ ಗಳಿಸಿದರೆ, ರಾಹುಲ್ 86 ರನ್ ಗಳಿಸಿದ್ದರು. ಜಡೇಜಾ ಕೂಡಾ 87 ರನ್ ಗಳಿಸಿದರು. ಈ ಮೂಲಕ ಮೂವರೂ ಶತಕ ಮಿಸ್ ಮಾಡಿಕೊಂಡರು.
ಇದು ಅಭಿಮಾನಿಗಳಿಗೆ ನಿರಾಸೆ ತಂದಿರಬಹುದು. ಆದರೆ ಈ ಮೂವರೂ 92 ವರ್ಷಗಳ ಬಳಿಕ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ. ಒಂದು ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್ ನಲ್ಲಿ ಮೂವರು ಬ್ಯಾಟಿಗರು 80 ರ ಆಸುಪಾಸಿನಲ್ಲಿ ಔಟಾಗುತ್ತಿರುವುದು ಕಳೆದ 92 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು.
ಇದೀಗ ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಮತ್ತೆ ಉತ್ತಮ ಆರಂಭ ಪಡೆದರೂ ಬಳಿಕ ತ್ವರಿತವಾಗಿ 4 ವಿಕೆಟ್ ಕಳೆದುಕೊಂಡಿತು. ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಒಲಿ ಪಾಪ್ 56 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 2, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದ್ದಾರೆ.