ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಗಾಯಗೊಂಡಿರುವ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಅವರ ಬದಲು ತಂಡಕ್ಕೆ ಸೌರಭ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಜಡೇಜಾ ತಮ್ಮ ಮಂಡಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಮುಂದಿನ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಅವರು ಮತ್ತೆ ಯಾವಾಗ ತಂಡಕ್ಕೆ ಮರಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ.
ಈ ನಡುವೆ ಹೈದರಾಬಾದ್ ನಿಂದ ಜಡೇಜಾ ನೇರವಾಗಿ ಬೆಂಗಳೂರಿನ ಎನ್ ಸಿಎಗೆ ಬಂದಿದ್ದಾರೆ. ಗಾಯಗೊಂಡ ಟೀಂ ಇಂಡಿಯಾ ಆಟಗಾರರು ಇಲ್ಲಿನ ವೈದ್ಯಕೀಯ ತಂಡದ ನಿಗಾದಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಬಳಿಕ ಎನ್ ಸಿಎ ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ನಂತರವಷ್ಟೇ ತಂಡಕ್ಕೆ ಮರಳಬಹುದಾಗಿದೆ.
ಇದೀಗ ಜಡೇಜಾ ಕೂಡಾ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಎನ್ ಸಿಎ ಫೋಟೋ ಪ್ರಕಟಿಸಿರುವ ಅವರು ಇನ್ನು ಕೆಲವು ದಿನ ಇದೇ ನನ್ನ ಮನೆ ಎಂದಿದ್ದಾರೆ.
ಜಡೇಜಾ ಜೊತೆಗೆ ಕೆಎಲ್ ರಾಹುಲ್ ಕೂಡಾ ತೊಡೆ ನೋವಿಗೊಳಗಾಗಿರುವುದರಿಂದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರೂ ಎನ್ ಸಿಎ ಸೇರಲಿದ್ದಾರೆ. ಈಗಾಗಲೇ ಗಾಯಗೊಂಡಿರುವ ಕೆಲವು ಆಟಗಾರರು ಎನ್ ಸಿಎನಲ್ಲಿದ್ದಾರೆ. ಅವರ ಜೊತೆ ಜಡೇಜಾ, ರಾಹುಲ್ ಕೂಡಾ ಸೇರಿಕೊಳ್ಳಲಿದ್ದಾರೆ. ಫೆಬ್ರವರಿ 2 ರಿಂದ ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ತಂಡದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಜೊತೆಗೆ ಸ್ಟಾರ್ ಆಟಗಾರರಾದ ಜಡೇಜಾ, ರಾಹುಲ್ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿರುವುದು ಖಂಡಿತಾ.