ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ದದ ದ್ವಿತೀಯ ಟೆಸ್ಟ್ ಗೆದ್ದ ಬಳಿಕ ಸರಣಿ ಗೆಲುವಿನ ಖುಷಿಯಲ್ಲಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ತಂಡದ ಆರಂಭಿಕರ ಬಗ್ಗೆ ಮಾತನಾಡಿದ್ದಾರೆ.
ಟೀಂ ಇಂಡಿಯಾ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಪೃಥ್ವಿ ಶಾ ರನ್ನು ಆರಂಭಿಕರಾಗಿ ಕಣಕ್ಕಿಳಿಸಿತ್ತು. ಇವರಲ್ಲಿ ಪೃಥ್ವಿ ಶಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಸರಣಿ ಶ್ರೇಷ್ಠರಾದರೆ ಕೆಎಲ್ ರಾಹುಲ್ ರ ಕಳಪೆ ಫಾರ್ಮ್ ವ್ಯಾಪಕ ಟೀಕೆಗೊಳಗಾಯಿತು.
ಹಾಗಿದ್ದರೂ ಕೋಚ್ ರವಿಶಾಸ್ತ್ರಿ ಕೆಎಲ್ ರಾಹುಲ್ ಪರವಾಗಿ ಮಾತನಾಡಿದ್ದಾರೆ. ರಾಹುಲ್ ಶೀಘ್ರದಲ್ಲೇ ಫಾರ್ಮ್ ಗೆ ಮರಳಲಿದ್ದಾರೆ. ಬಹುಶಃ ಅವರು ಈ ಪಂದ್ಯದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡಿರಬೇಕು. ಅವರು ವಿಶ್ವ ದರ್ಜೆಯ ಆಟಗಾರ. ಶೀಘ್ರದಲ್ಲೇ ಸ್ವಲ್ಪ ವಿಶ್ರಾಂತಿ ಪಡೆದರೆ ಸರಿ ಹೋಗುತ್ತಾರೆ. ಒಮ್ಮೆ ಅವರು ಲಯಕ್ಕೆ ಮರಳಿದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಸರಣಿ ಶ್ರೇಷ್ಠರಾದ ಪೃಥ್ವಿ ಶಾ ಬ್ಯಾಟಿಂಗ್ ಬಗ್ಗೆ ಹೊಗಳಿದ ರವಿಶಾಸ್ತ್ರಿ ಅವರಲ್ಲಿ ಸಚಿನ್ ಮತ್ತು ವೀರೇಂದ್ರ ಸೆಹ್ವಾಗ್ ಛಾಯೆ ಕಾಣಿಸುತ್ತದೆ. ಇಬ್ಬರ ಸಮ್ಮಿಶ್ರಣವೇ ಪೃಥ್ವಿ ಶಾ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.