ಮುಂಬೈ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ನಿರೀಕ್ಷೆಯಂತೇ ಔಟ್ ಆಫ್ ಫಾರ್ಮ್ ನಲ್ಲಿದ್ದ ಶಿಖರ್ ಧವನ್ ಗೆ ಕೊಕ್ ನೀಡಲಾಗಿದೆ.
ಶಿಖರ್ ಧವನ್ ಬದಲು ಶುಬ್ನಂ ಗಿಲ್ ಗೆ ಅವಕಾಶ ನೀಡಲಾಗಿದೆ. ಧವನ್ ಕಳೆದ ಕೆಲವು ಸರಣಿಗಳಲ್ಲಿ ರನ್ ಗಳಿಸಲು ಪರದಾಡಿದ್ದರು. ಹೀಗಾಗಿ ಅವರನ್ನು ಕಿತ್ತು ಹಾಕಬೇಕು ಎಂಬ ಆಕ್ರೋಶ ಕೇಳಿಬಂದಿತ್ತು.
ವಿಪರ್ಯಾಸವೆಂದರೆ ಇದೇ ಧವನ್ ಈ ವರ್ಷ ಕೆಲವೊಂದು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ಆದರೆ ಬ್ಯಾಟಿಗನಾಗಿ ರನ್ ಗಳಿಸಲು ವಿಫಲವಾಗಿದ್ದ ಶಿಖರ್ ಧವನ್ ಗೆ ಇಂದು ತಂಡದಿಂದಲೇ ಗೇಟ್ ಪಾಸ್ ನೀಡಲಾಗಿದೆ. ಆದರೆ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆಗೆ ಅವರು ನೀಡಿದ್ದ ಕೊಡುಗೆಗಳನ್ನು ಮರೆಯಲು ಸಾಧ‍್ಯವಿಲ್ಲ. ಇಬ್ಬರೂ ಜೊತೆಗೂಡಿ 18 ಬಾರಿ ಶತಕದ ಜೊತೆಯಾಟವಾಡಿದ್ದರು. ಆರಂಭಿಕರಾಗಿ ಇಬ್ಬರೂ 5148 ರನ್ ಗಳಿಸಿದ್ದರು. 2013 ರಿಂದ 2019 ರವರೆಗೆ ಧವನ್ ಪಾಲಿಗೆ ಸುವರ್ಣ ಕಾಲವಾಗಿತ್ತು. ಈ ವೇಳೆ ಅವರು ಸಾಕಷ್ಟು ರನ್ ಗಳಿಸಿದ್ದಾರೆ. ಆದರೆ ನಂತರ ಕಳೆಗುಂದಿದ ಧವನ್ ಮೇಲೇಳಲೇ ಇಲ್ಲ. ಮುಂದೆ ಅವರಿಗೆ ಅವಕಾಶ ಸಿಗುವ ಸಾಧ‍್ಯತೆ ತೀರಾ ಕಡಿಮೆ.