ಬೆಂಗಳೂರು: ಗಾಯದಿಂದ ಚೇತರಿಸಿಕೊಂಡು ಕೆಲವೇ ದಿನಗಳಲ್ಲಿ ಮತ್ತೆ ಇಶಾಂತ್ ಶರ್ಮಾ ಗಾಯದ ಗೂಡು ಸೇರಿರಿಕೊಂಡಿರುವುದರಿಂದ ಎನ್ ಸಿಎ ಕಾರ್ಯವೈಖರಿ ಮೇಲೆ ಅನುಮಾನಪಡುವಂತಾಗಿದೆ.
ರಾಹುಲ್ ದ್ರಾವಿಡ್ ಅಧ್ಯಕ್ಷರಾದ ಬಳಿಕ ಎನ್ ಸಿಎನಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಕೂಡಾ ಇದೇ ರೀತಿಯಲ್ಲಿ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾದಾಗ ಭಾರೀ ವಿವಾದವಾಗಿತ್ತು. ಎನ್ ಸಿಎ ತಪಾಸಣೆ ರೀತಿಯೇ ಸರಿಯಿಲ್ಲ ಎಂಬ ಆಕ್ರೋಶಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ದ್ರಾವಿಡ್ ಜತೆಗೆ ಮಾತುಕತೆಯನ್ನೂ ನಡೆಸಿದ್ದರು.
ಆದರೆ ಇದೀಗ ಮತ್ತೆ ಇಶಾಂತ್ ಇದೇ ರೀತಿ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗಿರುವುದರಿಂದ ಎನ್ ಸಿಎ ಕಾರ್ಯವೈಖರಿ ಮೇಲೆ ಪ್ರಶ್ನೆ ಮೂಡಿದೆ. ಎನ್ ಸಿಎಯ ಪ್ರತಿಯೊಂದು ನಿರ್ಧಾರಗಳೂ ದ್ರಾವಿಡ್ ಕೈಯಲ್ಲಿರುವುದರಿಂದ ಇದೀಗ ಈ ವಿವಾದಗಳು ದ್ರಾವಿಡ್ ಗೆ ಕುತ್ತಾಗುವ ಸಂಭವವಿದೆ. ಆಟಗಾರನಾಗಿ, ಕೋಚ್ ಆಗಿ ಅದ್ಭುತವಾಗಿ ಕಾರ್ಯನಿರ್ವಹಣೆ ಮಾಡಿ ಕಳಂಕರಹಿತರಾಗಿದ್ದ ದ್ರಾವಿಡ್ ಗೆ ಈ ವಿವಾದಗಳು ಯಾಕೋ ಉರುಳಾಗುವ ಲಕ್ಷಣ ಕಾಣುತ್ತಿದೆ.