ಚೆನ್ನೈ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ರನ್ ಮಳೆಯೇ ಹರಿದಿದೆ. ಕೊನೆಗೆ ಚೆನ್ನೈ ತವರಿನಲ್ಲಿ ಮೊದಲ ಮತ್ತು ಈ ಕೂಟದ ಎರಡನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ ಭರ್ಜರಿ 202 ರನ್ ಮಾಡಿತು. ಆಂಡ್ರೆ ರಸೆಲ್ ಬಿರುಗಾಳಿಯಂತೆ ಬ್ಯಾಟ್ ಬೀಸಿದರು. ಕೇವಲ 36 ಎಸೆತಗಳಲ್ಲಿ 11 ಸಿಕ್ಸರ್, 1 ಬೌಂಡರಿ ನೆರವಿನಿಂದ 88 ರನ್ ಚಚ್ಚಿದರು. ರಸೆಲ್ ದಾಳಿಗೆ ಹೆಚ್ಚು ಚಚ್ಚಿಸಿಕೊಂಡವರು ಬ್ರಾವೋ. ಅವರ ಮೂರೇ ಓವರ್ ಗಳಲ್ಲಿ 50 ರನ್ ಹರಿದು ಬಂತು. ಉಳಿದ ಬ್ಯಾಟ್ಸ್ ಮನ್ ಗಳು ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಚೆನ್ನೈಗೆ ಉತ್ತಮ ಆರಂಭ ದೊರಕಿತು. 5 ಓವರ್ ಗಳಾಗುವಷ್ಟರಲ್ಲಿ ಮೊತ್ತ 70 ದಾಟಿತ್ತು. ಶೇನ್ ವ್ಯಾಟ್ಸನ್ ಕೇವಲ 19 ಎಸೆತಗಳಲ್ಲಿ 42 ರನ್ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಆಡಲು ಬಂದ ಸ್ಯಾಮ್ ಬಿಲ್ಲಿಂಗ್ಸ್ ರಸೆಲ್ ರಂತೇ ಬ್ಯಾಟ್ ಬೀಸಿದರು. ಕೇವಲ 23 ಎಸೆತಗಳಲ್ಲಿ 56 ರನ್ ಚಚ್ಚಿದರು. ಇದರಲ್ಲಿ 5 ಸಿಕ್ಸರ್ ಸೇರಿತ್ತು. ಅಂತಿಮವಾಗಿ ಚೆನ್ನೈ ಕೊನೆಯ ಎಸೆತ ಬಾಕಿ ಇರುವಂತೆ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.