ಮುಂಬೈ: ಐಪಿಎಲ್ 2025 ರಲ್ಲಿ ಹಲವು ಆಟಗಾರರು ಹೊಸದಾಗಿ ಹರಾಜಿಗೊಳಪಡಲಿದ್ದಾರೆ. ಆ ಪೈಕಿ ಈ ಮೂವರು ನಾಯಕರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅವರು ಯಾರೆಂದು ಇಲ್ಲಿದೆ ವಿವರ.
ರಿಷಬ್ ಪಂತ್: 2021 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಬ್ ಪಂತ್ ಈ ಬಾರಿ ತಂಡದಿಂದ ರಿಲೀಸ್ ಆಗುವ ಸಾಧ್ಯತೆಯಿದೆ. ಈಗಾಗಲೇ ಕೋಚ್ ರಿಕಿ ಪಾಂಟಿಂಗ್ ರನ್ನು ಕಿತ್ತುಹಾಕಿರುವ ಡೆಲ್ಲಿ ಈಗ ನಾಯಕನನ್ನೂ ಕೈ ಬಿಡುವ ಚಿಂತನೆಯಲ್ಲಿದೆ. ರಿಷಬ್ ನಾಯಕತ್ವದಲ್ಲಿ ಡೆಲ್ಲಿ ತಂಡ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ.
ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಳೆದ ಎರಡು ಸೀಸನ್ ಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಮೊದಲ ಸೀಸನ್ ನಲ್ಲಿ ರಾಹುಲ್ ನೇತೃತ್ವದಲ್ಲಿ ತಂಡ ಫೈನಲ್ ತಲುಪಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಇದು ಮಾಲಿಕ ಸಂಜಯ್ ಗೊಯೆಂಕಾ ಅಸಮಾಧಾನಕ್ಕೂ ಗುರಿಯಾಗಿತ್ತು. ಮೈದಾನದಲ್ಲೇ ಅವರು ರಾಹುಲ್ ಜೊತೆ ವಾಗ್ವಾದ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ರಾಹುಲ್ ಈ ಸೀಸನ್ ನಲ್ಲಿತಂಡದಿಂದ ಹೊರ ನಡೆಯುವ ಸಾಧ್ಯತೆ ಹೆಚ್ಚಿದೆ.
ಸಂಜು ಸ್ಯಾಮ್ಸನ್: ಅಚ್ಚರಿಯೆನಿಸಿದರೂ ಇದು ಸತ್ಯ. ಸಂಜು ಸ್ಯಾಮ್ಸನ್ ರನ್ನು ಈ ಬಾರಿ ಫ್ರಾಂಚೈಸಿ ರಿಲೀಸ್ ಮಾಡಲಿದೆ ಎಂಬ ಸುದ್ದಿ ಭಾರೀ ವೈರಲ್ ಆಗಿದೆ. 2022 ರಿಂದ ಸಂಜು ರಾಜಸ್ಥಾನ್ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಆದರೆ ಕೊನೆಯಲ್ಲಿ ಜಾರಿ ಬೀಳುವ ಚಾಳಿ ಮೂರೂ ಸೀಸನ್ ನಲ್ಲಿ ಮುಂದುವರಿದಿದೆ. ಈ ಬಾರಿ ಅವರೂ ಮೆಗಾ ಹರಾಜಿಗೊಳಪಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.